ವೆಲ್ಲಿಂಗ್ಟನ್: ಮುಂದಿನ ಕಠಿಣವಾದ ಮೂರು ವರ್ಷಗಳ ಕಾಲ ಎಲ್ಲಾ ಮೂರು ಮಾದರಿಯ ಕ್ರಿಕೆಟ್ (ಟೆಸ್ಟ್, ಟಿ-20 ಮತ್ತು ಏಕದಿನ) ಆಡಲು ನಾನು ತಯಾರಿ ನಡೆಸುತ್ತಿದ್ದೇನೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
2021ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಂತರ ಯಾವುದಾದರೂ ಒಂದು ಮಾದರಿಯ ಕ್ರಿಕೆಟ್ನಿಂದ ಹೊರಗುಳಿಯುವ ಆಲೋಚನೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ, ನಾನು ಈಗಿನಿಂದ ಕಠಿಣವಾದ ಮೂರು ವರ್ಷಗಳ ಕಾಲ ತಯಾರಿ ನಡೆಸುತ್ತಿದ್ದೇನೆ. ಅದಾದ ನಂತರ ಮುಂದಿನ ವಿಚಾರದ ಬಗ್ಗೆ ಮಾತನಾಡೋಣ ಎಂದರು.
ಕಳೆದ 8 ವರ್ಷಗಳಿಂದ ಒಂದು ವರ್ಷದಲ್ಲಿ ಪ್ರಯಾಣ, ಅಭ್ಯಾಸ ಸೇರಿದಂತೆ 300 ದಿನಗಳ ಕಾಲ ನಾನು ಕ್ರಿಕೆಟ್ ಆಡಿದ್ದೇನೆ. ಎಲ್ಲಾ ಸಮಯದಲ್ಲೂ ಒಂದೇ ರೀತಿಯ ತೀವ್ರತೆ ಹೊಂದಿದ್ದೇನೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಸಮಯದಲ್ಲೂ ಕ್ರಿಕೆಟ್ ಬಗ್ಗೆ ಮಾತ್ರ ಯೋಚಿಸುತ್ತೇವೆ ಎಂದಲ್ಲ. ಎಲ್ಲಾ ಮಾದರಿಯ ಕ್ರಿಕೆಟ್ ಆಡುವವರು ಬಿಡುವಿಲ್ಲದ ವೇಳಾ ಪಟ್ಟಟಿಯ ನಡುವೆಯೂ ಸಾಕಷ್ಟು ಸಮಯಗಳ ಕಾಲ ಬಿಡುವು ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ಇದೇ ವೇಳೆ ನಾಯಕನ ಸ್ಥಾನದ ಬಗ್ಗೆಯೂ ಮಾತನಾಡಿರುವ ವಿರಾಟ್, ಒಂದು ತಂಡದ ನಾಯಕನಾಗುವುದೆಂದರೆ ಸುಲಭದ ಕೆಲಸವಲ್ಲ. ಕೇವಲ ದೈಹಿಕ ಸಾಮರ್ಥ್ಯ ಮಾತ್ರವಲ್ಲ, ತಂತ್ರಗಳನ್ನು ರೂಪಿಸಲು ಮಾನಸಿಕವಾಗಿಯೂ ಹೆಚ್ಚು ಸಾಮರ್ಥ್ಯ ಇರಬೇಕು ಎಂದಿದ್ದಾರೆ.
ಮುಂದಿನ 2 ರಿಂದ 3 ವರ್ಷದವರೆಗೆ ನನಗೆ ಯಾವುದೇ ಸಮಸ್ಯೆ ಇಲ್ಲ. 34 ರಿಂದ 35 ವರ್ಷದವರೆಗೆ ಕ್ರಿಕೆಟ್ ಆಡಬಲ್ಲೆ. ಆನಂತರ ನಾವು ಬೇರೆ ವಿಚಾರಗಳ ಬಗ್ಗೆ ಮಾತನಾಡೋಣ ಎಂದು ಕೊಹ್ಲಿ ಹೇಳಿದ್ದಾರೆ.
ಸಚಿನ್, ರಾಹುಲ್ ದ್ರಾವಿಡ್ ವಿವಿಎಸ್ ಲಕ್ಷ್ಮಣ್ ಅವರ ನಿವೃತ್ತಿಯನ್ನು ಉಲ್ಲೇಖಿಸಿ ಮಾತನಾಡಿದ ವಿರಾಟ್ ಕೊಹ್ಲಿ, ಐದಾರು ವರ್ಷಗಳ ಹಿಂದೆ ನಾನು ಪರಿವರ್ತನೆಗೊಂಡಿದ್ದೆ, ಅಂತಹದ್ದೇ ಪರಿವರ್ತನೆಗೆ ನಾನು ಸಿದ್ದನಿದ್ದೇನೆ. ಮುಂದಿನ ಎರಡರಿಂದ ಮೂರು ವರ್ಷಗಳ ಕಾಲ ತಂಡಕ್ಕೆ ನನ್ನ ಕೊಡುಗೆಯ ಅವಶ್ಯಕತೆ ಇದೆ. ಅದೇ ಎನರ್ಜಿಯಿಂದ ನಾನು ಕ್ರಿಕೆಟ್ ಆಡುತ್ತೇನೆ ಎಂದು ವಿರಾಟ್ ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ಮತ್ತು ಭಾರತ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗಲಿದ್ದು ಇಂದು ವಿರಾಟ್ ಮತ್ತು ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಟ್ರೋಫಿ ಅನಾವರಣ ಮಾಡಿದ್ದಾರೆ.