ಮುಂಬೈ: ಭಾರತ ತಂಡದ ರನ್ ಮಷಿನ್, ಶ್ರೇಷ್ಠ ನಾಯಕ,ದಾಖಲೆಗಳ ವೀರ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದ ಯಶಸ್ಸನ್ನು ಅವರ ತಂದೆಗೆ ಅರ್ಪಿಸಿದ್ದಾರೆ.
ದಶಕಗಳಿಂದ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ವಿಜೃಂಭಿಸುತ್ತಿರುವ ಏಕೈಕ ಆಟಗಾರನಾಗಿರುವ ವಿರಾಟ್ ಕೊಹ್ಲಿ ನಾಯಕನಾಗಿ ಹೋದಲ್ಲೆಲ್ಲಾ ವಿಜಯಯಾತ್ರೆ ನಡೆಸುತ್ತಿದ್ದಾರೆ. ಪ್ರತಿ ಸರಣಿಯಲ್ಲೂ ಒಂದಿಲ್ಲೊಂದು ದಾಖಲೆ ಬರೆಯುವ ಕೊಹ್ಲಿ ಕ್ರಿಕೆಟ್ ಜಗತ್ತು ಕಂಡ ಸರ್ವಶ್ರೇಷ್ಠ ಆಟಗಾರ ಎನಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ಬೇರೆ ದೇಶಗಳ ಯುವ ಕ್ರಿಕೆಟಿಗರು ಕೂಡ ತಾವೂ ಕೊಹ್ಲಿಯಂತಾಗಬೇಕು ಎನ್ನುತ್ತಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿರುವ ಕೊಹ್ಲಿ ಅದರ ಹಿಂದಿರುವ ವ್ಯಕ್ತಿಯನ್ನು ಬಹಿರಂಗಪಡಿಸಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಕೊಹ್ಲಿ, "ನನಗೆ ನನ್ನ ತಂದೆಯೇ ಸೂಪರ್ ಹೀರೋ. ಅವರು ತೆಗೆದುಕೊಂಡ ನಿರ್ಧಾರದಿಂದ ನನ್ನ ಜೀವನದ ಹಾದಿ ಸರಳವಾಯಿತು, ಅವರು ಈ ಜಗತ್ತಿನಲ್ಲಿರುವವರೆಗೂ ನನ್ನ ಸೂಪರ್ ಹೀರೋ ಆಗಿದ್ದರು" ಎಂದು ತಿಳಿಸಿದ್ದಾರೆ.
ನಮಗೆ ತುಂಬಾ ಜನ ಸ್ಫೂರ್ತಿ ಹಾಗೂ ಪ್ರೇರಣೆಯಾಗಬಹುದು. ಆದರೆ, ನಮ್ಮ ಮುಂದೆ ಯಾರಾದರೂ ಉದಾಹರಣೆ ಆದಾಗ ಅದರ ಪ್ರಭಾವವೇ ಬೇರೆ, ಆ ಉದಾಹರಣೆಯೇ ನನ್ನ ತಂದೆ. ನಾನು ಚಿಕ್ಕವನಿದ್ದಾಗ ಅವರ ಜತೆಗೆ ಕ್ರಿಕೆಟ್ ಆಡುತ್ತಿದ್ದೆ. ಆ ಸಂದರ್ಭದಲ್ಲಿ ಅವರು ನನ್ನ ಕರಿಯರ್ಗಾಗಿ ಬೇರೆ ಏನಾದರು ಹೇಳಬಹುದಿತ್ತು. ಆದರೆ, ಅವರು ನನ್ನ ನಿರ್ಧಾರವನ್ನು ಬೆಂಬಲಿಸಿದರು. ನಾನು ಕೂಡ ಕಠಿಣ ಪರಿಶ್ರಮದ ಮೇಲೆ ಮುಂದುವರಿದೆ ಎಂದು ಹೇಳಿಕೊಂಡಿರುವ ಕ್ಯಾಪ್ಟನ್ ಕೊಹ್ಲಿ, ತಮ್ಮ ಜೀವನದ ಸಾಧನೆಯನ್ನು ತಮ್ಮ ತಂದೆಗೆ ಅರ್ಪಿಸಿದ್ದಾರೆ.