ಚೆನ್ನೈ:ಕ್ರಿಕೆಟ್ನಲ್ಲಿ ವೇಗವಾಗಿ ಬೆಳೆಯುತ್ತಿರುವ ವೇಗಿ ಮೊಹಮ್ಮದ್ ಸಿರಾಜ್ ಮೈದಾನದಲ್ಲಿ ಕಠಿಣ ಹೆಜ್ಜೆಯನ್ನಿಡಲು ಮತ್ತು ಸಿಕ್ಕ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಿದ್ಧರಾಗಿದ್ದಾರೆ. ಉದಯೋನ್ಮುಖ ವೇಗಿಯಾಗಿರುವ ಸಿರಾಜ್, ಭಾರತದ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಕೊಳ್ಳುವುದು ತಮ್ಮ ಕನಸು ಎಂದಿದ್ದಾರೆ.
27 ವರ್ಷದ ವೇಗಿ ಭಾರತದ ಪರ 5 ಟೆಸ್ಟ್, ಒಂದು ಏಕದಿನ ಪಂದ್ಯ ಮತ್ತು 3 ಟಿ-20 ಪಂದ್ಯಗಳನ್ನಾಡಿದ್ದಾರೆ. ತಂಡದಲ್ಲಿ ಕಠಿಣ ಪೈಪೋಟಿಯಿದ್ದರೂ ಸಿಕ್ಕ ಕೆಲವೇ ಅವಕಾಶಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಪ್ರಸ್ತುತ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿರುವ ಮೂರು ಮಾದರಿಯ ಕ್ರಿಕೆಟ್ನಲ್ಲಿ ತಮ್ಮ ಸಾಧನೆಯ ಶ್ರೇಯವನ್ನು ತಂಡದ ಸಹ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ ಮತ್ತು 100 ಟೆಸ್ಟ್ ಪಂದ್ಯಗಳನ್ನಾಡಿರುವ ಇಶಾಂತ್ ಶರ್ಮಾಗೆ ನೀಡಿದ್ದಾರೆ.
ಜಸ್ಪ್ರೀತ್ ಬುಮ್ರಾ, ನಾನು ಬೌಲಿಂಗ್ ಮಾಡುವಾಗಲೆಲ್ಲಾ ನನ್ನ ಪಕ್ಕ ಇರುತ್ತಾರೆ. ಅವರು ಮೂಲಭೂತ ವಿಷಯಗಳಿಗೆ ಅಂಟಿಕೊಳ್ಳಬೇಕು, ಅದನ್ನು ಬಿಟ್ಟು ಹೆಚ್ಚೇನೂ ಮಾಡುವುದು ಬೇಡ ಎಂದು ಸಲಹೆ ನೀಡುತ್ತಾರೆ. ಅಂತಹ ಅನುಭವಿ ಆಟಗಾರನಿಂದ ಕಲಿಯುವುದಕ್ಕೆ ನನಗೆ ಬಹಳ ಖುಷಿಯಿದೆ ಎಂದು ಸಿರಾಜ್ ಆರ್ಸಿಬಿ ಟ್ವಿಟರ್ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.