ನವದೆಹಲಿ: ಮುಂಬೈ ಕ್ಯಾಪ್ಟನ್ ಪೃಥ್ವಿ ಶಾ ಬ್ಯಾಟಿಂಗ್ ಅಬ್ಬರದ ಮುಂದೆ ಮಕಾಡೆ ಮಲಗಿದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ನಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.
ದೆಹಲಿಯ ಪಾಲಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ ಆರಂಭಿಕ ಆಘಾತದ ನಡುವೆ ಕೂಡ ಕ್ಯಾಪ್ಟನ್ ಪೃಥ್ವಿ ಶಾ ಅಬ್ಬರದ 165 ರನ್ಗಳ ನೆರವಿನಿಂದ 49.2 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸ್ಪರ್ಧಾತ್ಮಕ 322 ರನ್ ಗಳಿಕೆ ಮಾಡಿತು. ಇವರಿಗೆ ಸಾಥ್ ನೀಡಿದ ಶಾಮ್ಸ್ 45 ರನ್ ಗಳಿಕೆ ಮಾಡಿದರು.
323 ರನ್ಗಳ ಸ್ಪರ್ಧಾತ್ಮಕ ರನ್ ಗುರಿ ಬೆನ್ನತ್ತಿದ್ದ ಕರ್ನಾಟಕ ತಂಡ ಆರಂಭದಲ್ಲೇ ಕ್ಯಾಪ್ಟನ್ ಸಮರ್ಥ್ (8) ವಿಕೆಟ್ ಕಳೆದುಕೊಂಡು ನಿರಾಸೆಗೊಳಗಾಯಿತು. ಹಿಂದಿನ ಪಂದ್ಯ ಸೇರಿ ಟೂರ್ನಿ ಉದ್ದಕ್ಕೂ ಮಿಂಚಿದ್ದ ದೇವದತ್ ಪಡಿಕ್ಕಲ್ ಉತ್ತಮವಾಗಿ ಬ್ಯಾಟ್ ಬೀಸಿದರೂ ಯಾವುದೇ ಆಟಗಾರರು ಅವರಿಗೆ ಉತ್ತಮ ಸಾಥ್ ನೀಡಲಿಲ್ಲ.
ಕೆ. ಸಿದ್ದಾರ್ಥ್ 8 ರನ್, ಮನೀಷ್ ಪಾಂಡೆ 1 ರನ್, ಕರುಣ್ ನಾಯರ್ 29 ರನ್, ಶ್ರೇಯಸ್ ಗೋಪಾಲ್ 33 ರನ್ ಗಳಿಕೆ ಮಾಡಿ ಪೆವಿಲಿಯನ್ ಸೇರಿಕೊಂಡರು. ಇದರ ಬೆನ್ನಲ್ಲೇ 64 ರನ್ ಗಳಿಕೆ ಮಾಡಿದ್ದ ಪಡಿಕ್ಕಲ್ ವಿಕೆಟ್ ಬೀಳುತ್ತಿದ್ದಂತೆ ತಂಡ ಸೋಲಿನ ದವಡೆಗೆ ಸಿಲುಕಿಕೊಂಡಿತು.
ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಶರತ್ (61), ಕೃಷ್ಣಪ್ಪ ಗೌತಮ್ (28) ರನ್ ಗಳಿಸಿ ತಂಡದಲ್ಲಿ ಗೆಲುವಿನ ನಗೆ ಮೂಡಿಸಿದರು. ಆದರೆ ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ಮುಂಬೈ ತಂಡ ಯಶಸ್ವಿಯಾಯಿತು. ತಂಡ ಕೊನೆಯದಾಗಿ 42.4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 250 ರನ್ ಗಳಿಕೆ ಮಾಡಲು ಮಾತ್ರ ಶಕ್ತವಾಯಿತು. ಈ ಮೂಲಕ 72 ರನ್ಗಳ ಸೋಲು ಕಂಡು, ಟೂರ್ನಿಯಿಂದ ಹೊರಬಿದ್ದಿದೆ. ಮುಂಬೈ ತಂಡದ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ತುಷಾರ್ ದೇಶಪಾಂಡೆ, ತನುಷ್, ಶಾಮ್ಸ್, ಪ್ರಶಾಂತ್ ತಲಾ 2 ವಿಕೆಟ್ ಪಡೆದುಕೊಂಡರೆ, ಧವಳ ಕುಲಕರ್ಣಿ ಹಾಗೂ ಯಶಸ್ವಿ ಜೈಸ್ವಾಲ್ ತಲಾ 1 ವಿಕೆಟ್ ಪಡೆದುಕೊಂಡರು.
ಗುಜರಾತ್ ಮೇಲೆ ಯುಪಿ ಸವಾರಿ
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಉತ್ತರ ಪ್ರದೇಶ ತಂಡ ಗೆಲುವು ಸಾಧಿಸಿದ್ದು, ಇದೀಗ ಫೈನಲ್ನಲ್ಲಿ ಮುಂಬೈ ವಿರುದ್ಧ ಸೆಣಸಾಟ ನಡೆಸಲಿದೆ. ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಗುಜರಾತ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 48.1 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 184 ರನ್ ಮಾತ್ರ ಗಳಿಕೆ ಮಾಡಿತು. ಇದರ ಬೆನ್ನತ್ತಿದ್ದ ಉತ್ತರ ಪ್ರದೇಶ ತಂಡ 42.4 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದ್ದು, ಇದೀಗ ಫೈನಲ್ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ.