ದುಬೈ: ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಗೆ ಐಸಿಸಿ ಸೋಮವಾರ ಘೋಷಿಸಿದ ದಶಕದ ಕ್ರೀಡಾ ಸ್ಫೂರ್ತಿ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯನ್ನು ವಿಶ್ವದಾದ್ಯಂತ ಇರುವ ಅಭಿಮಾನಿಗಳು ಆಯ್ಕೆ ಮಾಡಲಿದ್ದು, ಧೋನಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
2011ರಲ್ಲಿ ಟೆಸ್ಟ್ ಪಂದ್ಯದಲ್ಲಿ ಮಾರ್ಗನ್ ಬೌಂಡರಿಯತ್ತ ಚೆಂಡನ್ನು ಬಾರಿಸಿದರು. ಈ ವೇಳೆ 3 ರನ್ ತೆಗೆದುಕೊಂಡಿದ್ದರು. ಆದರೆ ಬೆಲ್ ಇದನ್ನು ಬೌಂಡರಿ ತಲುಪಿರಬಹುದೆಂದು ನಡೆದುಕೊಂಡು ಬಂದರು. ಆದರೆ ಫೀಲ್ಡರ್ ಪ್ರವೀಣ್ ಕುಮಾರ್ ಚೆಂಡನ್ನು ಅಭಿನಂದ್ ಮುಕುಂದ್ಗೆ ನೀಡಿದಾಗ ಅವರು ಬೆಲ್ಸ್ ಎಗರಿಸಿ ರನ್ಔಟ್ಗೆ ಅಪೀಲ್ ಮಾಡಿದರು. ಟಿವಿ ರಿಪ್ಲೇನಲ್ಲಿ ಚೆಂಡು ಬೌಂಡರಿ ಗೆರೆ ದಾಟದ್ದರಿಂದ ಬೆಲ್ ರನ್ಔಟ್ ಎಂದು ತೀರ್ಪು ನೀಡಲಾಗಿತ್ತು.
ಇದನ್ನು ಓದಿ;ಐಸಿಸಿ ಅವಾರ್ಡ್ಸ್ 2020: ರನ್ ಮಷಿನ್ ಕೊಹ್ಲಿಗೆ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ
ಆದರೆ ಇಂಗ್ಲೆಂಡ್ ತಂಡದ ನಾಯಕ ಆ್ಯಂಡ್ರೂ ಸ್ಟ್ರಾಸ್ ಮತ್ತು ಕೋಚ್ ಆ್ಯಂಡಿ ಫ್ಲವರ್ ಧೋನಿಯನ್ನು ರನ್ಔಟ್ ತೀರ್ಪನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ಧೋನಿ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದರು. ಇಯಾನ್ ಮಾರ್ಗನ್ ಜೊತೆಗೆ ಬೆಲ್ ಬ್ಯಾಟಿಂಗ್ ಬಂದಾಗ ಇಡೀ ಕ್ರೀಡಾಂಗಣವೇ ಅಚ್ಚರಿಗೆ ಒಳಗಾಗಿತ್ತು.
ನಿಯಮದ ಪ್ರಕಾರ ಇದು ಔಟ್ ಆಗಿದ್ದರೂ ಕ್ರೀಡಾ ಸ್ಫೂರ್ತಿಯ ಆಧಾರದ ಮೇಲೆ ಧೋನಿ ರನ್ಔಟ್ ಅಪೀಲ್ಅನ್ನು ಹಿಂತೆಗೆದುಕೊಳ್ಳಲು ಒಪ್ಪಿದ್ದರು. ಭಾರತ ತಂಡದ ನಾಯಕನ ಈ ನಿರ್ಧಾರಕ್ಕೆ ಇಸಿಬಿ ಚೇರ್ಮನ್ ಮತ್ತು ಇಂಗ್ಲೆಂಡ್ ತಂಡದ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಧೋನಿಗೆ ದಶಕದ ಕ್ರೀಡಾ ಸ್ಫೂರ್ತಿ ಅವಾರ್ಡ್ ಬರಲು ಕೂಡ ಈ ಘಟನೆ ಕಾರಣವಾಗಿದೆ.