ಮುಂಬೈ :ಭಾರತ ಕ್ರಿಕೆಟ್ ಇತಿಹಾಸದಲ್ಲಿ ಎಂಎಸ್ ಧೋನಿ ಹಾಗೂ ಸೌರವ್ ಗಂಗೂಲಿ ಇಬ್ಬರು ಶ್ರೇಷ್ಠ ನಾಯಕರು. ಇವರ ನೇತೃತ್ವದ ಭಾರತ ತಂಡ ಹಲವು ಮೈಲುಗಲ್ಲನ್ನು ತಲುಪಿದೆ. ಇವರ ನೇತೃತ್ವದಲ್ಲಿ ದೇಶ-ವಿದೇಶಗಳಲ್ಲಿ ಭಾರತ ದಿಗ್ವಿಜಯ ಸಾಧಿಸಿದೆ.
ಇತ್ತೀಚೆಗೆ ಗಂಗೂಲಿ ಕಷ್ಟಪಟ್ಟು ಕಟ್ಟಿದ ತಂಡದ ಲಾಭವನ್ನು ಧೋನಿ ಪಡೆದುಕೊಂಡರು. ಧೋನಿ ಕಾಲದಲ್ಲಿ ತಂಡ ಬಲಿಷ್ಠವಾಗಿತ್ತು. ಆದರೆ, ಆ ತಂಡವನ್ನು ಕಟ್ಟಿದವರು ದಾದಾ ಆಗಿದ್ದರು ಎಂದಿದ್ದ ಗಂಭೀರ್, ಇದೀಗ ಧೋನಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಧೋನಿ ಭಾರತವನ್ನು ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ದಿದ್ದರು. ಟೆಸ್ಟ್ ನಾಯಕತ್ವದಲ್ಲಿ ನೋಡುವುದಾದ್ರೆ ಧೋನಿ, ಸೌರವ್ ಗಂಗೂಲಿಗಿಂತ ತುಂಬಾ ಮುಂದಿದ್ದಾರೆ ಎಂದಿದ್ದಾರೆ.
ಆದರೂ ಗಂಗೂಲಿ ನಾಯಕತ್ವದಲ್ಲಿ ವಿದೇಶದಲ್ಲಿ ಆಡಿದ 21 ಟೆಸ್ಟ್ಗಳಲ್ಲಿ ಭಾರತ 11 ರಲ್ಲಿ ಗೆಲುವು ಹಾಗೂ 10ರಲ್ಲಿ ಸೋಲು ಕಂಡಿದೆ. ಧೋನಿ ನಾಯಕತ್ವದಲ್ಲಿ 30 ಪಂದ್ಯಗಳನ್ನಾಡಿದ್ದು, 6 ಗೆಲುವು ಹಾಗೂ 15 ಸೋಲು ಕಂಡಿದೆ. ಆದರೆ, ತವರಿನ ದಾಖಲೆ ನೋಡಿದಾಗ ಧೋನಿ ಗಂಗೂಲಿಗಿಂತ ಮುಂದಿದ್ದಾರೆ. ತವರಿನಲ್ಲಿ 30 ಪಂದ್ಯಗಳಲ್ಲಿ ಧೋನಿ ಮುನ್ನಡೆಸಿದ್ದು 21 ಗೆಲುವು ಕಂಡಿದ್ದಾರೆ. ಆದರೆ, ಗಂಗೂಲಿ 21 ಪಂದ್ಯಗಳಲ್ಲಿ ಕೇವಲ 10 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. ಈ ದಾಖಲೆಯನ್ನು ಪರಿಗಣಿಸಿ ಮಾತನಾಡಿರುವ ಗಂಭೀರ್ ಟೆಸ್ಟ್ ನಾಯಕತ್ವದಲ್ಲಿ ಧೋನಿಗೆ ಹೆಚ್ಚಿನ ಶ್ರೇಯ ಸಲ್ಲಬೇಕು ಎಂದಿದ್ದಾರೆ.
ಯಾಕೆಂದರೆ, ಗಂಗೂಲಿ ನಾಯಕರಾಗಿದ್ದಾಗ ಭಾರತ ತಂಡ ಬಲಿಷ್ಠವಾಗಿತ್ತು. ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್‌ರಂತಹ ಶ್ರೇಷ್ಠ ಬ್ಯಾಟ್ಸ್ಮನ್ಗಳನ್ನು ಹೊಂದಿದ್ದರು. ಜೊತೆಗೆ ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ರಂತಹ ಅನುಭವಿ ಮ್ಯಾಚ್ ವಿನ್ನಿಂಗ್ ಬೌಲರ್ಗಳನ್ನು ಹೊಂದಿದ್ದರು. ಆದರೆ, ಧೋನಿ ಭಜ್ಜಿಯನ್ನು ಮಾತ್ರ ಹೊಂದಿದ್ದರು. ಆದರೆ, ಸರಾಸರಿ ಬೌಲರ್ಗಳ ದಾಳಿಯಿಂದಲೇ ಭಾರತವನ್ನು ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ದಿದ್ದರು ಎಂದು ಗಂಭೀರ್ ತಿಳಿಸಿದ್ದಾರೆ.
ಇನ್ನು, ಭಾರತ ತಂಡ ಮಾಜಿ ನಾಯಕ ಕೆ ಶ್ರೀಕಾಂತ್ ಕೂಡ ಟೆಸ್ಟ್ ಕ್ರಿಕೆಟ್ನಲ್ಲಿ ಗಂಗೂಲಿಗಿಂತ ಧೋನಿ ಅತ್ಯುತ್ತಮ ನಾಯಕ ಎಂದಿದ್ದಾರೆ. ಅವರೂ ಕೂಡ ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ರ ಉಪಸ್ಥಿತಿ ಗಂಗೂಲಿಗೆ ನೆರವಾಗಿತ್ತು. ಧೋನಿಗೆ ಈ ಇಬ್ಬರು ಲೆಜೆಂಡ್ಗಳ ಸೇವೆ ಸಿಕ್ಕಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 2009ರಲ್ಲಿ ಶ್ರೀಲಂಕಾ ತಂಡವನ್ನು ಬಗ್ಗುಬಡಿದಿದ್ದ ಧೋನಿ ನೇತೃತ್ವದ ಭಾರತ ತಂಡ, ಟೆಸ್ಟ್ ಕ್ರಿಕೆಟ್ನಲ್ಲಿ ನಂಬರ್ ಒನ್ ಸ್ಥಾನಕ್ಕೇರಿತ್ತು.