ಲಕ್ನೋ: ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಮಂಗಳವಾರ ನಡೆದ 2ನೇ ಏಕದಿನ ಪಂದ್ಯದ ವೇಳೆ ಆಕರ್ಷಕ 80 ರನ್ಗಳಿಸಿದ ಭಾರತದ ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಲಕ್ನೋದ ಅಟಲ್ ಬಿಹಾರಿ ವಾಜಪಾಯಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್ ಅಂತರದಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತ್ತು, ಈ ಪಂದ್ಯದಲ್ಲಿ ಮಂಧಾನ 64 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಿತ 80 ರನ್ ಚಚ್ಚಿದ್ದರು, ಈ ಮೂಲಕ ಚೇಸಿಂಗ್ ವೇಳೆ ಹೆಚ್ಚು ಬಾರಿ ಸತತ 50 ಅಥವಾ ಅದಕ್ಕಿಂತ ಹೆಚ್ಚು ರನ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಮಂದಾನ ಏಕದಿನ ಕ್ರಿಕೆಟ್‌ನಲ್ಲಿ ಚೇಸಿಂಗ್ ವೇಳೆ ಸತತ 10 ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ವಿಶೇಷವೆಂದರೆ ಈ ದಾಖಲೆಯನ್ನು ಇನ್ನೂ ಪುರುಷ ಕ್ರಿಕೆಟಿಗರೇ ಮಾಡಿಲ್ಲ. ಸ್ಮೃತಿ 2018ರಿಂದ ಇಲ್ಲಿಯವರೆಗೆ ಚೇಸಿಂಗ್ ವೇಳೆ 67, 52, 86, 53*, 73*, 105, 90*, 63, 74 ಮತ್ತು 80* ರನ್‌ಗಳಿಸಿದ್ದಾರೆ.
ಮಂಧಾನಗಿಂತ ಮೊದಲು ನ್ಯೂಜಿಲ್ಯಾಂಡ್ನ ಸೂಜಿ ಬೇಟ್ಸ್ 2015ರಿಂದ 17ರವರೆಗೆ ಸತತ 9 ಬಾರಿ 50ಕ್ಕಿಂತ ಹೆಚ್ಚು ರನ್ಗಳಿಸಿದ್ದರು. ಇವರಿಬ್ಬರನ್ನು ಹೊರತುಪಡಿಸಿದರೆ, ಜಾಕಿ ಕ್ಲಾರ್ಕ್, ಭಾರತದ ಜಯಾ ಶರ್ಮಾ ಮತ್ತು ಮಿಥಾಲಿ ರಾಜ್ ಸೇರಿದಂತೆ ಇತರೆ 7 ಆಟಗಾರ್ತಿಯರು ತಲಾ 4 ಬಾರಿ ಚೇಸಿಂಗ್ ವೇಳೆ ಸತತ 50+ ಸ್ಕೋರ್ಗಳಿಸಿದ್ದಾರೆ.
ಇದನ್ನೂ ಓದಿ: ಮಂದಾನ ಸ್ಫೋಟಕ ಅರ್ಧಶತಕ: ದ.ಆಫ್ರಿಕಾ ವನಿತೆಯ ವಿರುದ್ಧ ಭಾರತಕ್ಕೆ ಜಯ