ಕರ್ನಾಟಕ

karnataka

ETV Bharat / sports

ರಾಜಸ್ಥಾನ್​ ವಿರುದ್ಧ ಕೆಕೆಆರ್​ಗೆ ಗೆಲುವು... ಮಾರ್ಗನ್​ ಪಡೆಯ​ ಪ್ಲೇ ಆಫ್ ಕನಸು ಇನ್ನೂ ಜೀವಂತ!! - RR vs KKR match prediction

192 ರನ್​ಗಳ ಗುರಿ ಪಡೆದ ರಾಜಸ್ಥಾನ್ ರಾಯಲ್ಸ್​ ರನ್​ರೇಟ್​ ಜೊತೆಗೆ ಗೆಲ್ಲಬೇಕಾದ ಒತ್ತಡದಿಂದ ಬ್ಯಾಟಿಂಗ್ ನಡೆಸಿ ಕೇವಲ 131 ರನ್​ಗಳಿಗೆ ಕುಸಿಯುವ ಮೂಲಕ 60 ರನ್​ಗಳಿಂದ ಸೋಲೊಪ್ಪಿಕೊಂಡಿತು

ರಾಜಸ್ಥಾನ್​ ವಿರುದ್ಧ ಕೆಕೆಆರ್​ಗೆ ಗೆಲುವು
ರಾಜಸ್ಥಾನ್​ ವಿರುದ್ಧ ಕೆಕೆಆರ್​ಗೆ ಗೆಲುವು

By

Published : Nov 1, 2020, 11:48 PM IST

ದುಬೈ: ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ 60 ರನ್​ಗಳ ಭರ್ಜರಿ ಗೆಲುವಿನೊಂದಿಗೆ ತನ್ನ ಪ್ಲೇ ಆಫ್​ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇತ್ತ ಸೋತ ರಾಜಸ್ಥಾನ್ ರಾಯಲ್ಸ್​ ಟೂರ್ನಿಯಿಂದ 3ನೇ ತಂಡವಾಗಿ ಹೊರಬಿದ್ದಿತು.

ಮೊದಲು ಬ್ಯಾಟಿಂಗ್​ ನಡೆಸಿದ ಕೆಕೆಆರ್​ ತಂಡ ನಾಯಕ ಮಾರ್ಗನ್ 68, ಶುಬ್ಮನ್ ಗಿಲ್​ 36 ಹಾಗೂ ತ್ರಿಪಾಠಿ ಅವರ 39 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 191 ರನ್​ಗಳಿಸಿತ್ತು.

192 ರನ್​ಗಳ ಗುರಿ ಪಡೆದ ರಾಜಸ್ಥಾನ್ ರಾಯಲ್ಸ್​ ರನ್​ರೇಟ್​ ಜೊತೆಗೆ ಗೆಲ್ಲಬೇಕಾದ ಒತ್ತಡದಿಂದ ಬ್ಯಾಟಿಂಗ್ ನಡೆಸಿ ಕೇವಲ 131 ರನ್​ಗಳಿಗೆ ಕುಸಿಯುವ ಮೂಲಕ 60 ರನ್​ಗಳಿಂದ ಸೋಲೊಪ್ಪಿಕೊಂಡಿತು. ರಾಜಸ್ಥಾನ್ ರನ್​ರೇಟ್​ ಪಡೆದು ಪ್ಲೇ ಆಫ್​ಗೆ ಪ್ರವೇಶಿಸಿಬೇಕಾದರೆ ಈ ಪಂದ್ಯವನ್ನು 14.1 ಓವರ್​ಗಳಲ್ಲಿ ಗೆಲ್ಲಲೇಬೇಕಾಗಿತ್ತು.

ಈ ಒತ್ತಡದಲ್ಲಿ ಬ್ಯಾಟಿಂಗ್ ಇಳಿದ ಆರ್​ಆರ್​ ಬ್ಯಾಟ್ಸ್​ಮನ್​ಗಳ ವಿರುದ್ಧ ಕೆಕೆಆರ್​ ಬೌಲರ್​ಗಳು ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.

ಪ್ಯಾಟ್​ ಕಮ್ಮಿನ್ಸ್ ಪವರ್​​ ಪ್ಲೇ​ನಲ್ಲೇ ರಾಬಿನ್ ಉತ್ತಪ್ಪ(6), ಬೆನ್​ಸ್ಟೋಕ್ಸ್​(18), ಸ್ಟಿವ್​ ಸ್ಮಿತ್​(1) ವಿಕೆಟ್​ ಪಡೆದು ರಾಜಸ್ಥಾನಕ್ಕೆ ಆಘಾತ ನೀಡಿದರು. ನಂತರ ಬಂದ ಸಂಜು ಸಾಮ್ಸನ್​ರನ್ನು ಶಿವಂ ಮಾವಿ ಪೆವಿಲಿಯನ್​ಗಟ್ಟಿದರೆ, ತಮ್ಮ 3ನೇ ಓವರ್​ನಲ್ಲಿ ಕಮ್ಮಿನ್ಸ್ ಯುವ ಬ್ಯಾಟ್ಸ್​ಮನ್​​ ರಿಯಾನ್​ ಪರಾಗ್​ರನ್ನು ಖಾತೆ ತೆರೆಯುವ ಮುನ್ನವೇ ಔಟ್​ ಮಾಡಿದರು.

ನಂತರ ಬಟ್ಲರ್ ಹಾಗೂ ತೆವಾಟಿಯಾ 44 ರನ್​ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡುವ ಮುನ್ಸೂಚನೆ ನೀಡಿದ್ದರು. ಆದ್ರೆ ಈ ಹಂತದಲ್ಲಿ ಕಣಕ್ಕಿಳಿದ ವರುಣ್ ಚಕ್ರವರ್ತಿ 35 ರನ್​ಗಳಿಸಿದ್ದ ಬಟ್ಲರ್ ಹಾಗೂ 31 ರನ್​ಗಳಿಸಿದ್ದ ತೆವಾಟಿಯಾರನ್ನು ತಮ್ಮ ಸ್ಪಿನ್​​ ಬಲೆಗೆ ಬೀಳಿಸಿದರು.

ನಂತರ ಬಾಲಂಗೋಚಿಗಳಾದ ಆರ್ಚರ್​ (6), ಕಾರ್ತಿಕ್ ತ್ಯಾಗಿ(2) ರನ್​ಗಳಿಸಿ ಔಟ್ ಆದರು. ಶ್ರೇಯಸ್ ಗೋಪಾಲ್​ 23 ರನ್​ಗಳಿಸಿ ಔಟಾಗದೆ ಉಳಿದರು.

ಕೆಕೆಆರ್ ಪರ ಪ್ಯಾಟ್ ಕಮ್ಮಿನ್ಸ್​ 34 ರನ್​ ನೀಡಿ 4 ವಿಕೆಟ್​ ಪಡೆದು ಗೆಲುವಿನ ರೂವಾರಿಯಾದರು. ಕಮ್ಮಿನ್ಸ್​ಗೆ ಬೆಂಬಲ ನೀಡಿದ ಶಿವಂ ಮಾವಿ 15ಕ್ಕೆ 2, ವರುಣ್ ಚಕ್ರವರ್ತಿ 20ಕ್ಕೆ 2 ಹಾಗೂ ನಾಗರ್ಕೋಟಿ 24ಕ್ಕೆ 1 ವಿಕೆಟ್​ ಪಡೆದು ಮಿಂಚಿದರು.

ಈ ಗೆಲುವಿನೊಂದಿಗೆ ಕೆಕೆಆರ್​ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಮಂಗಳವಾರ ನಡೆಯುವ ಮುಂಬೈ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್​ ತಂಡ ಗೆಲುವು ಸಾಧಿಸಿದರೆ ಕೋಲ್ಕತ್ತಾ ಟೂರ್ನಿಯಿಂದ ಹೊರ ಬೀಳಲಿದೆ. ಒಂದು ವೇಳೆ ಹೈದರಾಬಾದ್ ಸೋತರೆ ಕೋಲ್ಕತ್ತಾ 3 ಅಥವಾ 4ನೇ ಸ್ಥಾನ ಪಡೆಯಲಿದೆ. ಇದಲ್ಲದೆ ನಾಳೆ ನಡೆಯುವ ಆರ್​ಸಿಬಿ ಮತ್ತು ಡೆಲ್ಲಿ ತಂಡಗಳ ನಡುವಿನ ಪಂದ್ಯದಲ್ಲಿ ಹೆಚ್ಚು ಅಂತರದಿಂದ ಯಾವುದಾದೇ ತಂಡ ಸೋಲನುಭಿವಿಸಿದರೂ ಕೂಡ ರನ್​ರೇಟ್​ ಆಧಾರದಲ್ಲಿ ಪ್ಲೇ ಆಫ್​ ಹಂತಕ್ಕೇರುವ ಸಣ್ಣ ಅವಕಾಶ ಕೂಡ ಕೆಕೆಆರ್​ಗಿದೆ.

ABOUT THE AUTHOR

...view details