ಸಿಡ್ನಿ (ಆಸ್ಟ್ರೇಲಿಯಾ): ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಭಾನುವಾರ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಆಸೀಸ್ ಅಭಿಮಾನಿಗಳು ಮತ್ತೊಮ್ಮೆ ನಿಂದಿಸಿದ್ದು, ಅಶಿಸ್ತು ತೋರಿದ ಕೆಲ ಪ್ರೇಕ್ಷಕರನ್ನು ಮೈದಾನದಿಂದ ಹೊರ ಕಳಿಸಲಾಗಿದೆ.
ನಾಲ್ಕನೇ ದಿನದ ಎರಡನೇ ಸೆಷನ್ ಮುಕ್ತಾಯದ ಹಂತದಲ್ಲಿ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಸಿರಾಜ್, ನಾಯಕ ಅಜಿಂಕ್ಯ ರಹಾನೆ ಅವರ ಬಳಿಗೆ ಹೋಗಿ ಕೆಲವು ಅಭಿಮಾನಿಗಳು ಆತನನ್ನು ನಿಂದಿಸಿದ್ದಾಗಿ ತಿಳಿಸಿದ್ರು. ರಹಾನೆ ಅಂಪೈರ್ ಪಾಲ್ ರೀಫೆಲ್ ಅವರೊಂದಿಗೆ ಮಾತುಕತೆ ನಡೆಸಿದರು.
ಇದಾದ ನಂತರ ಅಂಪೈರ್‌ಗಳು, ಇತರ ಮ್ಯಾಚ್ ಅಧಿಕಾರಿಗಳು ಮತ್ತು ಭದ್ರತಾ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿದರು. ಸಿರಾಜ್ ಅವರನ್ನು ನಿಂದಿಸಿದ್ದ ಸ್ಟ್ಯಾಂಡ್‌ಗೆ ತೆರಳಿದ ಭದ್ರತಾ ಸಿಬ್ಬಂದಿ ಕೆಲವರನ್ನು ತಕ್ಷಣವೇ ಸ್ಥಳದಿಂದ ಹೊರಹೋಗುವಂತೆ ತಿಳಿಸಿದರು.
ನಿನ್ನೆಯಷ್ಟೆ ಬುಮ್ರಾ ಸಿರಾಜ್ ಅವರನ್ನು ಮೈದಾನದಲ್ಲಿ ಪ್ರೇಕ್ಷಕರು ನಿಂದಿಸಿರುವ ಬಗ್ಗೆ ಬಿಸಿಸಿಐ ದೂರು ನೀಡಿತ್ತು. ಆದರೆ ಇಂದೂ ಕೂಡ ಅಂತದ್ದೇ ಘಟನೆ ನಡೆದಿದ್ದು, ಜಂಟಲ್ಮ್ಯಾನ್ ಗೇಮ್ನಲ್ಲಿ ಇಂಥ ವರ್ತನೆ ಸರಿಯಲ್ಲ ಎಂದು ಮಾಜಿ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ನಡೆದ ಘಟನೆ ಕುರಿತು ಟ್ವೀಟ್ ಮಾಡಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, "ಎಸ್‌ಸಿಜಿಯಲ್ಲಿ ನಡೆಯುತ್ತಿರುವ ಘಟನೆ ನೋಡುತ್ತಿರುವುದು ತುಂಬಾ ದುರದೃಷ್ಟಕರ. ಇಂಥ ವರ್ತನೆಗೆ ಅವಕಾಶ ಇರಬಾರದು, ಮೈದಾನದಲ್ಲಿ ಆಟಗಾರರನ್ನು ನಿಂದಿಸುವ ಅಗತ್ಯವನ್ನು ಎಂದಿಗೂ ಅರ್ಥಮಾಡಿಕೊಳ್ಳಲಾಗಿಲ್ಲ. ನೀವು ಆಟವನ್ನು ವೀಕ್ಷಿಸಲು ಬಂದಿರದಿದ್ದರೆ ಮತ್ತು ಗೌರವಯುತವಾಗಿರಲು ಸಾಧ್ಯವಾಗದಿದ್ದರೆ ದಯವಿಟ್ಟು ಮೈದಾನಕ್ಕೆ ಬಂದು ವಾತಾವರಣವನ್ನು ಹಾಳು ಮಾಡಬೇಡಿ" ಎಂದಿದ್ದಾರೆ.