ನವದೆಹಲಿ: ಭಾರತದ ವಿರುದ್ಧ ವಿಶ್ವಕಪ್ನಲ್ಲಿ ಸೋಲನುಭವಿಸಿದ ಪಾಕಿಸ್ತಾನ ತಂಡದ ಆಟಗಾರರ ನಿಂದಿಸುತ್ತಿರುವುದನ್ನು ಖಂಡಿಸಿರುವ ಮಾಜಿ ನಾಯಕ ಮೊಹಮ್ಮದ್ ಯೂಸುಫ್, ಆಟಗಾರರು ಮತ್ತು ಅವರ ಕುಟುಂಬಸ್ಥರ ಜೊತೆ ಕೆಟ್ಟದಾಗಿ ನಡೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಜೂನ್ 16 ರಂದು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ 89 ರನ್ಗಳಿಂದ ಹೀನಾಯ ಸೋಲು ಕಂಡಿತ್ತು. ಈ ಸೋಲನ್ನು ಸಹಿಸಿದ ಅಭಿಮಾನಿಗಳು ಸಾಮಾಜಿಕ ಜಾಲಾತಣಗಳಲ್ಲಿ, ಮೈದಾನದಲ್ಲಿ ಹಾಗೂ ಮೈದಾನದ ಹೊರಗೂ ಆಟಗಾರರನ್ನು ನಿಂದಿಸುತ್ತಿದ್ದಾರೆ. ಮೊನ್ನೆಯಷ್ಟೇ ಅಭಿಮಾನಿಯೊಬ್ಬ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ತಮ್ಮ ಪುತ್ರನೊಂದಿಗೆ ಶಾಪಿಂಗ್ ಹೋಗಿದ್ದ ವೇಳೆ ಲೈವ್ ವಿಡಿಯೋ ಮಾಡಿ ಹಂದಿಗೆ ಹೋಲಿಸಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ವ್ಯಕ್ತಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಲಾಗಿತ್ತು.