ನೇಪಿಯರ್: ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಅವರ ಸ್ಫೋಟಕ ಅರ್ಧಶತದ ನೆರವಿನಿಂದ ಪಾಕಿಸ್ತಾನ ತಂಡ ಕೊನೆಯ ಟಿ-20 ಪಂದ್ಯದಲ್ಲಿ 4 ವಿಕೆಟ್ಗಳ ಜಯ ಸಾಧಿಸಿದೆ. ಕಿವೀಸ್ ತಂಡ ಕೊನೆಯ ಪಂದ್ಯ ಸೋತರೂ 2-1ರಲ್ಲಿ ಟಿ-20 ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡು ನ್ಯೂಜಿಲ್ಯಾಂಡ್ ತಂಡವನ್ನು 173/7 ರನ್ಗಳಿಗೆ ನಿಯಂತ್ರಿಸಿತ್ತು. ಡಿವೋನ್ ಕಾನ್ವೆ 63 ರನ್ ಗಳಿಸಿದರೆ, ಫಿಲಿಫ್ಸ್ 31, ಸೀಫರ್ಟ್ 31 ರನ್ ಗಳಿಸಿದರು. ಶಾಹೀನ್ ಅಫ್ರಿದಿ 43ಕ್ಕೆ 2, ಹ್ಯಾರೀಸ್ ರವೂಫ್ 44ಕ್ಕೆ 2 ಹಾಗೂ ಫಹೀಮ್ ಅಶ್ರಫ್ 20ಕ್ಕೆ 3 ವಿಕೆಟ್ ಪಡೆದು ಮಿಂಚಿದರು.
174 ರನ್ಗಳ ಗುರಿ ಪಡೆದ ಪಾಕಿಸ್ತಾನ ತಂಡ ರಿಜ್ವಾನ್ ಅವರ ಅರ್ಧಶತಕ ಹಾಗೂ ಹಫೀಜ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 19.4 ಓವರ್ಗಳಲ್ಲಿ ಗೆಲುವಿನ ನಗೆ ಬೀರಿತು. ರಿಜ್ವಾನ್ 59 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದಂತೆ 89 ರನ್ ಸಿಡಿಸಿದರೆ, ಹಫೀಜ್ 29 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 41 ರನ್ ಗಳಿಸಿ ಗೆಲುವಿನ ರೂವಾರಿಯಾದರು.
ಕಿವೀಸ್ ಪರ ಕುಗ್ಗಲೀನ್ಜ್ 40ಕ್ಕೆ 2, ಟಿಮ್ ಸೌಥಿ 25ಕ್ಕೆ 2, ಜೇಮ್ಸ್ ನಿಶಾಮ್ 37ಕ್ಕೆ 2 ವಿಕೆಟ್ ಪಡೆದರೂ ಸೋಲನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ನ್ಯೂಜಿಲ್ಯಾಂಡ್ ತಂಡ ಮೊದಲ ಪಂದ್ಯವನ್ನು 5 ಹಾಗೂ 2ನೇ ಪಂದ್ಯವನ್ನು 9 ವಿಕೆಟ್ಗಳಿಂದ ಗೆದ್ದು ಸರಣಿ ಜಯಿಸಿತು.
ಇದನ್ನು ಓದಿ:ಟೆಸ್ಟ್ ಮ್ಯಾಚ್‌ನಲ್ಲಿ ಪಿಂಕ್ ಬಾಲ್ ಬಳಕೆ ಬಗ್ಗೆ ಸ್ಟೀವ್ ಸ್ಮಿತ್ ಹೇಳುವುದೇನು?