ಲಾಹೋರ್: ಪಾಕಿಸ್ತಾನ ಪರ ದೇಶಿ ಕ್ರಿಕೆಟ್ ಆಡುತ್ತಿದ್ದ ಕ್ರಿಕೆಟಿಗನೋರ್ವ ಜೀವನೋಪಾಯಕ್ಕಾಗಿ ಪಿಕ್ಅಪ್ ವ್ಯಾನ್ ಓಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಫಜಲ್ ಸುಭಾನ್ ಎಂಬ ಪ್ರತಿಭಾನ್ವಿತ ಕ್ರಿಕೆಟಿಗ ಜೀವನ ನಿರ್ವಹಣೆಗಾಗಿ ಬಾಡಿಗೆ ವ್ಯಾನ್ ಓಡಿಸುತ್ತಿದ್ದಾರೆ. ಇವರು ಪಾಕಿಸ್ತಾನ ದೇಶಿ ಕ್ರಿಕೆಟ್ ಆಟಗಾರನಾಗಿದ್ದು, 40 ಪ್ರಥಮ ದರ್ಜೆ ಮತ್ತು 29 ಲಿಸ್ಟ್ ಎ ಪಂದ್ಯಗಳನ್ನಾಡಿದ್ದಾರೆ. ಅಂಡರ್ 19 ತಂಡದಲ್ಲೂ ಆಡಿರುವುದಾಗಿ ಪತ್ರಕರ್ತರೊಬ್ಬರು ನಡೆಸಿದ ಸಂದರ್ಶನದಲ್ಲಿ ತಮ್ಮ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ.
31 ವರ್ಷದ ಫಜಲ್ ತನ್ನ ಪ್ರಸ್ತುತ ಸ್ಥಿತಿಗತಿ ಕುರಿತು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಕ್ರಿಕೆಟ್ ಆಡುತ್ತಿದ್ದಾಗ ಲಕ್ಷಕ್ಕೂ ಹೆಚ್ಚು ವೇತನ ಪಡೆಯುತ್ತಿದ್ದೆ. ಆದರೆ ಈಗ ತಿಂಗಳಿಗೆ 30 ರಿಂದ 35 ಸಾವಿರಾರು ರೂಪಾಯಿ ಸಂಪಾದಿಸುವುದು ಕಷ್ಟವಾಗಿದೆ. ವಾಹನ ಓಡಿಸುವುದರಿಂದ ಬರುವ ಹಣದಲ್ಲೇ ಜೀವನದ ಬಂಡಿ ಸಾಗಿಸಬೇಕು. ಅದು ಕೆಲವು ಸೀಸನ್ಗಳಲ್ಲಿ ಬಾಡಿಗೆ ಸಿಗುತ್ತದೆ, ಒಮ್ಮೊಮ್ಮೆ 10 ದಿನಗಳವರೆಗೂ ಬಾಡಿಗೆ ಸಿಗುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಹಿರಿಯ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಕೂಡ ಪ್ರತಿಕ್ರಿಯಿಸಿದ್ದು, ಹೊಸ ನಿಯಮದ ಪ್ರಕಾರ, ಕೇವಲ 200 ಕ್ರಿಕೆಟಿಗರು ಮಾತ್ರ ಮಂಡಳಿಯ ಸೌಲಭ್ಯಗಳನ್ನ ಅನುಭವಿಸಲಿದ್ದಾರೆ. ಈ ನಿಯಮದಿಂದ ಸಾವಿರಾರು ಕ್ರಿಕೆಟಿಗರು, ಕೋಚ್ಗಳು ಮತ್ತು ಮ್ಯಾನೇಜ್ಮೆಂಟ್ ಸಿಬ್ಬಂದಿ ಬೀದಿ ಪಾಲಾಗಿದ್ದಾರೆ. ಈ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳಲಿದ್ದಾರೆ ಅನ್ನೋದು ಗೊತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸುಭಾನ್ 40 ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 2301 ರನ್ ಗಳಿಸಿದ್ದಾರೆ. 29 ಲಿಸ್ಟ್ ಎ ಪಂದ್ಯಗಳಿಂದ 659 ರನ್ ದಾಖಲಿಸಿದ್ದಾರೆ.