ಲಾಹೋರ್:ಪಾಕಿಸ್ತಾನದ ತ್ರಿವಳಿ ವೇಗಿಗಳಾದ ಮೊಹಮ್ಮದ್ ಅಮೀರ್, ಹಸನ್ ಅಲಿ ಹಾಗೂ ವಹಾಬ್ ರಿಯಾಜ್ ಪಾಕಿಸ್ತಾರ ಕ್ರಿಕೆಟ್ ಬೋರ್ಡ್‌ನಿಂದ (ಪಿಸಿಬಿ)ಯ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದಿದ್ದಾರೆ.
2020-21ರ ಆವೃತ್ತಿಯಲ್ಲಿ ಕೇಂದ್ರ ಗುತ್ತಿಗೆಯಲ್ಲಿ ಅವಕಾಶ ಪಡೆದ ಆಟಗಾರರ ಪಟ್ಟಿ ಘೋಷಣೆಯಾಗಿದ್ದು, ಇದರಲ್ಲಿ ಹಿರಿಯ ವೇಗಿಗಳಿಗೆ ಗೇಟ್ಪಾಸ್ ನೀಡಲಾಗಿದೆ.
ಹಸನ್ ಕಳೆದ ವರ್ಷ ಗಾಯದ ಕಾರಣ ಹಲವಾರು ಸರಣಿಗಳನ್ನು ತಪ್ಪಿಸಿಕೊಂಡಿದ್ದರು. ವಹಾಬ್ ಮತ್ತು ಅಮೀರ್ ಕೇವಲ ವೈಟ್ಬಾಲ್ ಕ್ರಿಕೆಟ್ನತ್ತ ಆಸಕ್ತಿ ತೋರಿದ್ದರು. ಆದ್ದರಿಂದ ಅವರನ್ನು ಬಿಟ್ಟು ಬೇರೆ ಆಟಗಾರರತ್ತ ಗಮನ ನೀಡುವುದಕ್ಕೆ ಇದು ಉತ್ತಮ ಸಂದರ್ಭ ಎಂದು ಆಯ್ಕೆ ಸಮಿತಿ ಮುಖ್ಯಸ್ಥ, ಪಾಕಿಸ್ತಾನ ಮುಖ್ಯ ಕೋಚ್ ಮಿಸ್ಬಾ-ಉಲ್-ಹಕ್ ತಿಳಿಸಿದರು.
ಜುಲೈ 1ರಿಂದ ಪಿಸಿಬಿ ಗುತ್ತಿಗೆ ಅವಧಿ ಆರಂಭವಾಗಲಿದೆ. ನಾಯಕತ್ವದಿಂದ ಕೆಳಗಿಳಿದಿರುವ ಸರ್ಫರಾಜ್ ಅಹ್ಮದ್ ಎ ಕ್ಯಾಟಗರಿಯಿಂದ ಬಿ ಕ್ಯಾಟಗರಿಗೆ ಜಾರಿದ್ದಾರೆ. ಟೆಸ್ಟ್ ತಂಡದ ನಾಯಕ ಅಜರ್ ಅಲಿ ಹಾಗೂ ಶಹೀನ್ ಅಫ್ರಿದಿ ಬಿ ನಿಂದ ಎ ಗೆ ಬಡ್ತಿ ಪಡೆದಿದ್ದಾರೆ.
ಹೈದರ್ ಅಲಿ, ಹ್ಯಾರೀಸ್ ರಾವುಫ್ ಹಾಗೂ ಮೊಹಮ್ಮದ್ ಹಸ್ನೈನ್ ಹೊಸದಾಗಿ ಸೃಷ್ಟಿಯಾಗಿರುವ ಎಮರ್ಜಿಂಗ್ ಪ್ಲೇಯರ್ಸ್ ಲಿಸ್ಟ್ನಲ್ಲಿ ಅವಕಾಶ ಪಡೆದರೆ, ಮತ್ತೊಬ್ಬ ಯುವ ಬೌಲರ್ ನಶೀಮ್ ಶಾ ಸಿ ಕ್ಯಾಟಗರಿಯಲ್ಲಿ ಅವಕಾಶಗಿಟ್ಟಿಸಿದ್ದಾರೆ.
ಎ ಕ್ಯಾಟಗರಿಯಲ್ಲಿ ಬಾಬರ್ ಅಜಮ್, ಅಜರ್ ಅಲಿ, ಶಹೀನ್ ಅಫ್ರಿದಿ ಮಾತ್ರ ಅವಕಾಶ ಪಡೆದಿದ್ದಾರೆ. ಇನ್ನು ಬಿ ಕ್ಯಾಟಗರಿಯಲ್ಲಿ 9 ಮಂದಿ, ಸಿ ಕ್ಯಾಟಗರಿಯಲ್ಲಿ 6 ಹಾಗೂ ಹೊಸದಾಗಿ ಸೃಷ್ಟಿ ಮಾಡಿರುವ ಎಮರ್ಜಿಂಗ್ ಕ್ಯಾಟಗರಿಯಲ್ಲಿ ಮೂವರು ಅವಕಾಶ ಪಡೆದಿದ್ದಾರೆ.