ಲಾಹೋರ್: ಕೌಟುಂಬಿಕ ಕಾರಣ ನೀಡಿ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹಿಂದೆ ಸರಿದಿದ್ದ ವೇಗಿ ಮೊಹಮ್ಮದ್ ಅಮೀರ್ ಮತ್ತೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ. ಹ್ಯಾರೀಸ್ ಸೊಹೈಲ್ಬದಲಿಗೆ ಅಮೀರ್ ಆಯ್ಕೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಟೀಮ್ ಮ್ಯಾನೇಜ್ಮೆಂಟ್ ಕೋರಿಕೆಯ ಮೇರೆಗೆ ಮೊಹಮ್ಮದ್ ಅಮೀರ್ ಜೊತೆಗೆ ಮೊಹಮ್ಮದ್ ಇಮ್ರಾನ್ರನ್ನು ಇಂಗ್ಲೆಂಡ್ಗೆ ಕಳುಹಿಸಲು ಒಪ್ಪಿಗೆ ಸೂಚಿಸಿದೆ.
ಪ್ರಸ್ತುತ ಪ್ರಕ್ತಿಯೆಯ ಭಾಗವಾಗಿ ಅಮೀರ್ ಮತ್ತು ಇಮ್ರಾನ್ ಇಬ್ಬರು ಸೋಮವಾರ ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದಾರೆ. ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲು 2 ಪರೀಕ್ಷೆಗಳಲ್ಲಿ ನೆಗೆಟಿವ್ ಫಲಿತಾಂಶದ ಅಗತ್ಯವಿದೆ. ಮೊದಲ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ನಂತರ ಅವರಿಬ್ಬರನ್ನು ಬಯೋ ಸೆಕ್ಯೂರ್ ತಾಣಕ್ಕೆ ಸ್ಥಳಾಂತರಿಸಲಾಗುತ್ತದೆ. ಲಾಹೋರ್ನಲ್ಲಿ ಬುಧವಾರ ನಡೆಸುವ ಎರಡನೇ ಟೆಸ್ಟ್ನಲ್ಲಿ ನೆಗೆಟಿವ್ ಫಲಿತಾಂಶ ಬಂದರೆ ಅವರು ಈ ವಾರಾಂತ್ಯದಲ್ಲಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪಿಸಿಬಿ ತಿಳಿಸಿದೆ.
ಅಮೀರ್ ತಂಡಕ್ಕೆ ಸೇರಿದ ಕೂಡಲೇ ಮೀಸಲು ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರೋಹೈಲ್ ನಜೀರ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗುವುದು ಎಂದು ಪಿಸಿಬಿ ಹೇಳಿದೆ.
ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಮತ್ತು ಮೂರು ಟಿ -20 ಪಂದ್ಯಗಳನ್ನು ಆಡಲಿದೆ. ಮೊದಲ ಟೆಸ್ಟ್ ಆಗಸ್ಟ್ 5 ರಿಂದ ಪ್ರಾರಂಭವಾಗಲಿದೆ.