ಮುಂಬೈ: ಭಾರತ ಮಹಿಳಾ ತಂಡದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಕೆಣಕಿದ ವ್ಯಕ್ತಿವೋರ್ವನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತ ತಂಡದ ಪರ ಸುಮಾರು 20 ವರ್ಷಗಳ ಕಾಳ ಕ್ರಿಕೆಟ್ ಆಡಿರುವ ಮಿಥಾಲಿ ಮೂಲತಃ ತಮಿಳುನಾಡಿನವರು. ಆದರೆ ಅವರು ಹುಟ್ಟಿದ್ದು ರಾಜಸ್ಥಾನದ ಜೋಧ್ಪುರ್ನಲ್ಲಿ. ಸದ್ಯ ವಾಸವಾಗಿರುವುದು ಹೈದರಾನಾದ್ನಲ್ಲಿ. ಆದರೆ ತಮಿಳು ಕುಟುಂಬದಲ್ಲಿ ಹುಟ್ಟಿ ಭಾತೃಭಾಷೆ ತಮಿಳು ಮಾತನಾಡುವುದಕ್ಕೆ ಬರಲ್ಲ, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಮಾತ್ರ ಮಾತನಾಡುತ್ತಾರೆ ಎಂದು ಟ್ವೀಟ್ ಮೂಲಕ ವ್ಯಕ್ತಿ ಛೇಡಿಸಿದ್ದ.
ಈ ಟ್ವೀಟ್ಗೆ ಉತ್ತರಿಸಿರುವ 36 ವರ್ಷದ ಮಿಥಾಲಿ, "ತಮಿಳು ನನ್ನ ಮಾತೃಭಾಷೆ, ನಾನು ತುಂಬಾ ಚೆನ್ನಾಗಿ ತಮಿಳು ಮಾತನಾಡುತ್ತೇನೆ, ನಾನೊಬ್ಬಳು ತಮಿಳಿನವಳು ಎನ್ನುವುದಕ್ಕೆ ಹೆಮ್ಮೆಯಿದೆ"(ತಮಿಳಿನಲ್ಲೇ ಬರೆದಿದ್ದಾರೆ.), ನಂತರ ಇಂಗ್ಲಿಷ್ನಲ್ಲಿ ಮುಂದವರಿಸಿ "ಆದರೆ ನಾನು ಎಲ್ಲಕ್ಕಿಂತ ಮೊದಲು ಹೆಮ್ಮೆಯ ಭಾರತೀಯಳು. ನನ್ನ ಪ್ರತೀ ಪೋಸ್ಟ್ಗೂ ನಿಮ್ಮಂತಹವರು ಮಾಡುವ ಟೀಕೆಗಳು ನನಗೆ ಬೆಳೆಯಲು ಸ್ಪೂರ್ತಿ" ಎಂದು ಟ್ವೀಟ್ ಮಾಡಿ ತಕ್ಕ ಉತ್ತರವನ್ನೇ ನೀಡಿದ್ದಾರೆ.
ಟ್ವೀಟ್ ಮಾಡಿದ ನಂತರ ಟೇಲರ್ ಸ್ವಿಫ್ಟ್ - ಯು ನೀಡ್ ಕಾಮ್ ಡೌನ್ ಎನ್ನುವ ಇಂಗ್ಲಿಷ್ ಗೀತೆಯೊಂದನ್ನು ಅರ್ಪಿಸುತ್ತಿರುವುದಕ್ಕಾಗಿ ಟೀಕಿಸಿದವನ ಟ್ವಿಟ್ಟರ್ ಲಿಂಕ್ಮಾಡಿದ್ದಾರೆ.
ಇತ್ತೀಚೆಗೆ ನಡೆದಿದ್ದ ದಕ್ಷಿಣ ಅಫ್ರಿಕಾ ವಿರುದ್ಧ 20 ವರ್ಷಗಳ ಏಕದಿನ ಕ್ರಿಕೆಟ್ ಆಡಿದ ವಿಶ್ವದ ಏಕೈಕ ಕ್ರಿಕೆಟರ್ ಎಂಬ ದಾಖಲೆಗೆ ಮಿಥಾಲಿ ರಾಜ್ ಪಾತ್ರರಾಗಿದ್ದರು. ಇವರ ನಾಯಕತ್ವದಲ್ಲಿ ಭಾರತ ತಂಡ ಹರಿಣಗಳ ವಿರುದ್ಧ 3-0ಯಲ್ಲಿ ಏಕದಿನ ಸರಣಿ ವಶಪಡಿಸಿಕೊಂಡಿತ್ತು.