ಮುಂಬೈ: ದಕ್ಷಿಣ ಅಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 20 ವರ್ಷಗಳನ್ನು ಕಳೆದು ಸಚಿನ್, ಜಯಸೂರ್ಯರಂತಹ ಮಹಾನ್ ದಿಗ್ಗಜರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.
ಮಹಿಳಾ ಕ್ರಿಕೆಟ್ನ ಸಚಿನ್ ಎಂದೇ ಖ್ಯಾತರಾದ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಆಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 2 ದಶಕಗಳು ಕಳೆದಿವೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ್ತಿಯಾದ ಮಿಥಾಲಿ ರಾಜ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 20 ವರ್ಷ 102 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಇನ್ನೂ ಕ್ರಿಕೆಟ್ನಲ್ಲಿ ಯಶಸ್ವಿ ಬ್ಯಾಟ್ಸ್ಮನ್ ಆಗಿ ಮುಂದುವರಿಯುತ್ತಿದ್ದಾರೆ.
ಜೂನ್ 25, 1999ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮಿಥಾಲಿ, 204 ಏಕದಿನ, 10 ಟೆಸ್ಟ್ ಹಾಗೂ 89 ಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಏದದಿನ ಕ್ರಿಕೆಟ್ನಲ್ಲಿ 7 ಶತಕ ಹಾಗೂ 52 ಅರ್ಧಶತಕಗಳ ಸಹಿತ 6731 ರನ್ ಗಳಿಸಿದ್ದಾರೆ. 89 ಟಿ-20 ಪಂದ್ಯಗಳಲ್ಲಿ 17 ಅರ್ಧಶತಕ ಸಹಿತ 2364 ರನ್ ಗಳಿಸಿದ್ದಾರೆ. ಇದೇ ವರ್ಷ ಟಿ-20 ಕ್ರಿಕೆಟ್ನಿಂದ ದೂರ ಸರಿದಿದ್ದಾರೆ.
ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್, ಅತಿ ಹೆಚ್ಚು ಅರ್ಧಶತಕ, ಅತಿ ಹೆಚ್ಚು ಏಕದಿನ ಪಂದ್ಯ ಹಾಗೂ ಅತಿ ಹೆಚ್ಚು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿದ ಮೊದಲ ಮಹಿಳೆ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಭಾರತದ ಕ್ರಿಕೆಟ್ ದಂತಕತೆ ಸಚಿನ್(22 ವರ್ಷ 91 ದಿನಗಳು), ಶ್ರೀಲಂಕಾದ ಜಯಸೂರ್ಯ(21 ವರ್ಷ 184 ದಿನಗಳು), ಪಾಕಿಸ್ತಾನದ ಜಾವೇದ್ ಮಿಯಾಂದಾದ್(20 ವರ್ಷ 272 ದಿನಗಳು) ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 20 ವರ್ಷ ಪೂರೈಸಿದ 4ನೇ ಕ್ರಿಕೆಟರ್ ಎಂಬ ಸಾಧನೆಗೂ ಕೂಡ ಮಿಥಾಲಿ ಪಾತ್ರರಾಗಿದ್ದಾರೆ.