ಲಾಹೋರ್:ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನ ಹುದ್ದೆಯತ್ತ ಗಮನಹರಿಸುವ ಸಲುವಾಗಿ ಮಿಸ್ಬಾ-ಉಲ್-ಹಕ್ ಮುಖ್ಯ ಆಯ್ಕೆದಾರನ ಜವಾಬ್ದಾರಿಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೇಳಿದೆ.
ನೂತನ ಆಯ್ಕೆದಾರರ ಆಯ್ಕೆ ಡಿಸೆಂಬರ್ 1ರಿಂದ ಪ್ರಾರಂಭವಾಗಲಿದ್ದು, ಅಲ್ಲಿಯವರೆಗೆ ಮಿಸ್ಬಾ ಅವರೇ ಆಯ್ಕೆದಾರನ ಜವಾಬ್ದಾರಿ ನಿರ್ವಹಿಸುತ್ತಾರೆ. ಮಿಸ್ಬಾ ಅವರು ಅಕ್ಟೋಬರ್ 19ರಿಂದ ತವರಿನಲ್ಲಿ ಆರಂಭವಾಗಲಿರುವ ಜಿಂಬಾಬ್ವೆ ವಿರುದ್ಧದ ಸರಣಿ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗಾಗಿ ತಂಡವನ್ನು ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದೆ.
ಮಿಸ್ಬಾ ಕಳೆದ ವಾರ ರಾಷ್ಟ್ರೀಯ ಟಿ-20 ಕಪ್ ಸಂದರ್ಭದಲ್ಲಿ ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾಸಿಮ್ ಖಾನ್‌ಗೆ ತಮ್ಮ ನಿರ್ಧಾರ ತಿಳಿಸಿದ್ದಾರೆ.
ತಮ್ಮ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಮಿಸ್ಬಾ-ಉಲ್-ಹಕ್, "ನಾನು ಉಭಯ ಪಾತ್ರಗಳನ್ನು ಸಂಪೂರ್ಣವಾಗಿ ಆನಂದಿಸಿದೆ. ಆದರೆ ಕಳೆದ 12 ತಿಂಗಳು ನನ್ನ ಜವಾಬ್ದಾರಿಯನ್ನು ಪರಿಶೀಲಿಸಿದ ನಂತರ ಕೆಲಸದ ಒತ್ತಡದಿಂದಾಗಿ, ನನ್ನ ಅಧಿಕಾರಾವಧಿಯ ಮುಂದಿನ 24 ತಿಂಗಳುಗಳಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ ಮತ್ತು ನನ್ನ ಸಮಯ, ಶಕ್ತಿ ಮತ್ತು ಗಮನವನ್ನು ಒಂದು ಕಡೆ ವಿನಿಯೋಗಿಸುತ್ತೇನೆ" ಎಂದಿದ್ದಾರೆ.
"ಕೋಚಿಂಗ್ ನನ್ನ ಉತ್ಸಾಹ, ಆಟಗಾರರ ಅಭಿವೃದ್ಧಿಗೆ ಕೊಡುಗೆ ನೀಡುವುದು ಮತ್ತು ದೊಡ್ಡ ಯಶಸ್ಸನ್ನು ಸಾಧಿಸಲು ತಂಡಕ್ಕೆ ಸಹಾಯ ಮಾಡುವುದು ನನ್ನ ಉದ್ದೇಶವಾಗಿದೆ. ಕಳೆದ ವರ್ಷ ನನ್ನನ್ನು ನೇಮಿಸಿದಾಗ, ನನಗೆ ಮೊದಲು ಕೋಚಿಂಗ್ ಜವಾಬ್ದಾರಿ ನೀಡಲಾಯಿತು. ನಂತರ ಆಯ್ಕೆ ಸಮಿತಿಯ ಮುಖ್ಯಸ್ಥರಾಗುವ ಆಯ್ಕೆಯನ್ನು ನೀಡಲಾಯಿತು. ನಾನು ಅದನ್ನು ಸ್ವೀಕರಿಸಿದ್ದೇನೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅವರ ತಿಳುವಳಿಕೆ ಮತ್ತು ನನ್ನ ಆಲೋಚನಾ ಪ್ರಕ್ರಿಯೆಯನ್ನು ಬೆಂಬಲಿಸಿದ್ದಕ್ಕಾಗಿ ನಾನು ಆಭಾರಿಯಾಗಿದ್ದೇನೆ" ಎಂದಿದ್ದಾರೆ.