ನವದೆಹಲಿ: ಕಾಶ್ಮೀರದ ಗಡಿಯಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿರುವುದರಿಂದ ಟೀಂ ಇಂಡಿಯಾದ ಆಲ್ರೌಂಡರ್ ಇರ್ಫಾನ್ ಪಠಾಣ್ ಸೇರಿದಂತೆ 100 ಮಂದಿ ಕ್ರಿಕೆಟಿಗರಿಗೆ ಕಾಶ್ಮೀರ ತೊರೆಯುವಂತೆ ಸೂಚನೆ ನೀಡಲಾಗಿತ್ತು .
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡದ ಮೆಂಟರ್ ಇರ್ಫಾನ್ ಪಠಾಣ್, ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಸುಮಾರು 100 ಮಂದಿ ಆಟಗಾರರು ನಿನ್ನೆಯಷ್ಟೆ ಕಾಶ್ಮೀರ ತೊರೆದಿದ್ದಾರೆ.
ಕಣಿವೆ ರಾಜ್ಯ ತೊರೆದುಬಂದಿರುವ ಇರ್ಫಾನ್ ಪಠಾಣ್, 'ನಾನು ಕಾಶ್ಮೀರ ತೊರೆದಿದ್ದರೂ ನನ್ನ ಮನಸ್ಸು ಮತ್ತು ಹೃದಯ ಕಾಶ್ಮೀರದಲ್ಲಿದೆ. ನಾನು ನಮ್ಮ ಭಾರತೀಯ ಸೇನೆ ಮತ್ತು ಕಾಶ್ಮೀರದ ಸಹೋದರ, ಸಹೋದರಿಯರೊಂದಿಗಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ.
ಇದೇ ತಿಂಗಳ 17ರಿಂದ ಪ್ರಾರಂಭವಾಗುವ ದುಲೀಪ್ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಟೂರ್ನಮೆಂಟ್ಗಾಗಿ ಜಮ್ಮು ಮತ್ತು ಕಾಶ್ಮೀರ ತಂಡ ಅಭ್ಯಾಸದಲ್ಲಿ ನಿರತವಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಶ್ಮೀರದಲ್ಲಿ ಯಾವುದೇ ಕ್ರೀಡಾ ಚಟುವಟೆಕೆ ನಡೆಸೋದು ಬೇಡವೆಂದು ರಕ್ಷಣಾ ಸಿಬ್ಬಂದಿ ಸೂಚಿಸಿದ್ದಾರೆ.