ಕೊಲಂಬೋ: ದಕ್ಷಿಣ ಆಫ್ರಿಕಾ ಮೂಲದ ಮಿಕ್ಕಿ ಅರ್ಥರ್ ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
ಎರಡು ವರ್ಷದ ಅವಧಿಗೆ ಮಿಕ್ಕಿ ಅರ್ಥರ್ ಶ್ರೀಲಂಕಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇದೇ ವೇಳೆ ಜಿಂಬಾಬ್ವೆಯ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಬ್ಯಾಟಿಂಗ್ ಕೋಚ್, ಡೇವಿಡ್ ಸೇಕರ್ ಬೌಲಿಂಗ್ ಹಾಗೂ ಶೇನ್ ಮೆಕ್ಡರ್ಮಾಟ್ರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಲಾಗಿದೆ.
ಕೋಚ್ ಆಯ್ಕೆ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಿಇಒ ಆಶ್ಲೆ ಡಿಸಿಲ್ವ ಮಾಹಿತಿ ನೀಡಿದ್ದು, ಎಲ್ಲ ಕೋಚ್ಗಳು ಎರಡು ವರ್ಷದ ಗುತ್ತಿಗೆಯಲ್ಲಿರಲಿದ್ದಾರೆ ಎಂದು ತಿಳಿಸಿದ್ದಾರೆ.
ಮಿಕ್ಕಿ ಅರ್ಥರ್ ಶ್ರೀಲಂಕಾದ 11ನೇ ಕೋಚ್ ಆಗಲಿದ್ದು, ಕಳೆದ ಎಂಟು ವರ್ಷದಲ್ಲಿ ಲಂಕಾ ಕ್ರಿಕೆಟ್ ತಂಡ ಹನ್ನೊಂದು ಕೋಚ್ಗಳನ್ನು ಕಂಡಿದೆ. ಶ್ರೀಲಂಕಾದ ಪಾಕಿಸ್ತಾನ ಪ್ರವಾಸ ಅರ್ಥರ್ ಮೊದಲ ಪರೀಕ್ಷೆಯಾಗಿರಲಿದೆ.
ವಿಶ್ವಕಪ್ ಮುಕ್ತಾಯದವರೆಗೂ ಮಿಕ್ಕಿ ಅರ್ಥರ್ ಪಾಕಿಸ್ತಾನ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ ವಿಶ್ವಕಪ್ ಕಳಪೆ ಪ್ರದರ್ಶನ ಹಾಗೂ ಇತರೆ ಸರಣಿಗಳ ವೈಫಲ್ಯದ ಕಾರಣಕ್ಕೆ ಅರ್ಥರ್ ಅವರನ್ನು ಪಿಸಿಬಿ ತೆಗೆದುಹಾಕಿತ್ತು.
ಅರ್ಥರ್ ಅವಧಿಯಲ್ಲೇ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತಲ್ಲದೆ, ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೂ ಏರಿತ್ತು ಎನ್ನುವುದು ಉಲ್ಲೇಖಾರ್ಹ.
ಡೇವಿಡ್ ಸೇಕರ್ ಈ ಮೊದಲು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಕ್ಕೆ ಬೌಲಿಂಗ್ ಕೋಚ್ ಆಗಿದ್ದರು. ಶೇನ್ ಮೆಕ್ಡರ್ಮಾಟ್ ದಕ್ಷಿಣ ಆಫ್ರಿಕಾ ತಂಡಕ್ಕೆ ಫೀಲ್ಡಿಂಗ್ ಕೋಚ್ ಆಗಿದ್ದರು.