ಕೊಲಂಬೊ:ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಟೂರ್ನಿಯಲ್ಲಿ ಭಾಗಿಯಾಗುವ ಆಟಗಾರರು, ಕೋಚ್ ಹಾಗೂ ಸಹಾಯಕ ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಇದರಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ತಂಡದ ಮುಖ್ಯ ಕೋಚ್ ಮಿಕ್ಕಿ ಅರ್ಥರ್ ಹಾಗೂ ಪ್ರಮುಖ ಬ್ಯಾಟ್ಸ್ಮನ್ ಲಾಹೀರು ತಿರಿಮನ್ನೆಗೆ ಕೊರೊನಾ ಇರುವುದು ದೃಢಗೊಂಡಿದ್ದು, ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮಾಹಿತಿ ನೀಡಿದೆ. ಫೆ. 20ರಿಂದ ಉಭಯ ತಂಡಗಳ ನಡುವೆ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದೆ.
ಓದಿ: ನಾಯಕ ವಿರಾಟ್ ಕೊಹ್ಲಿ ಬೆನ್ನಿಗೆ ನಿಲ್ಲುವುದೇ ನನ್ನ ಕೆಲಸ : ಉಪನಾಯಕ ರಹಾನೆ
36 ಸದಸ್ಯರ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಅದರಲ್ಲಿ ಇಬ್ಬರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಇದೀಗ ಇಬ್ಬರು ಸರ್ಕಾರದಿಂದ ಹೊರಡಿಸಲಾಗಿರುವ ಮಾರ್ಗಸೂಚಿ ಅನುಸರಣೆ ಮಾಡುವುದು ಕಡ್ಡಾಯವಾಗಿದೆ. ಪ್ರಮುಖ ಪ್ಲೇಯರ್ ಹಾಗೂ ಕೋಚ್ಗೆ ಸೋಂಕು ತಗುಲಿರುವ ಕಾರಣ ಪ್ರವಾಸದ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಶ್ರೀಲಂಕಾ ಎರಡು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳಲ್ಲಿ ಭಾಗಿಯಾಗಬೇಕಾಗಿತ್ತು. ಇನ್ನು ತಮಗೆ ಕೋವಿಡ್ ಸೋಂಕು ತಗುಲಿರುವ ಬಗ್ಗೆ ಲಾಹೀರು ತಿರಿಮನ್ನೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.