ಅಬುಧಾಬಿ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 13ನೇ ಆವೃತ್ತಿಯ ಐಪಿಎಲ್ನಲ್ಲೂ ತಾವು ಕ್ವಿಂಟನ್ ಡಿ ಕಾಕ್ ಜೊತೆ ಆರಂಭಿಕರಾಗಿ ಕಣಕ್ಕಿಳಿಯುವುದಾಗಿ ಖಚಿತಪಡಿಸಿದ್ದಾರೆ.
ಮುಂಬೈ ತಂಡದ ತರಬೇತುದಾರ ಮಹೇಲಾ ಜಯವರ್ಧನೆ ಜೊತೆಯಲ್ಲಿ ಆನ್ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ಟೂರ್ನಿಯಲ್ಲಿ ಆರಂಭಿಕನಾಗಿ ಮುಂದುವರಿಯುವುದಾಗಿ ಹೇಳಿಕೊಂಡಿದ್ದಾರೆ.
ನಾನು ಕಳೆದ ವರ್ಷ ಇಡೀ ಪಂದ್ಯಾವಳಿಯಲ್ಲಿ ಆರಂಭಿಕನಾಗಿದ್ದೆ. ಈ ವರ್ಷವೂ ಅದನ್ನೇ ಮುಂದುವರಿಸುತ್ತೇನೆ. ತಂಡವಾಗಿ ನಾವು ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಳ್ಳುತ್ತೇವೆ. ತಂಡಕ್ಕೆ ಅಗತ್ಯವಾದದನ್ನು ಮಾಡಲು ನನಗೆ ಸಂತೋಷವಿದೆ. ನಾನು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆನಂದಿಸುತ್ತೇನೆ ಮತ್ತು ಅದನ್ನು ನಿರ್ವಹಿಸುತ್ತಿದ್ದೇನೆ. ಆದರೆ ನಾನು ಭಾರತ ತಂಡಕ್ಕೆ ಆಡುವಾಗಲು ಎಲ್ಲಾ ಆಯ್ಕೆಗಳನ್ನು ತೆರೆದಿಡಲು ಸಂದೇಶ ನೀಡಿದ್ದೇನೆ, ಇಲ್ಲಿಯೂ ಅದನ್ನೇ ಮಾಡುತ್ತೇನೆ ಎಂದಿದ್ದಾರೆ.
ತಂಡ ಸಂಯೋಜನೆ ಬಗ್ಗೆ ಮಾತನಾಡಿರುವ ಕೋಚ್ ಜಯವರ್ಧನೆ, ರೋಹಿತ್ ಮತ್ತು ಡಿ ಕಾಕ್ ಕಳೆದ ಆವೃತ್ತಿಯಲ್ಲಿ ಅದ್ಭುತ ಆರಂಭ ನೀಡಿದ್ದಾರೆ. ಕ್ರಿಸ್ಲಿನ್ ಸೇರ್ಪಡೆ ಕೂಡ ತಂಡಕ್ಕೆ ಅದ್ಭುತ ಆಯ್ಕೆಯಾಗಿದೆ. ರೋಹಿತ್ - ಡಿಕಾಕ್ ಪರಸ್ಪರ ಸ್ಥಿರವಾಗಿರುತ್ತಾರೆ ಮತ್ತು ಇಬ್ಬರೂ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಜೊತೆಗೆ ಅವರಿಬ್ಬರು ಉತ್ತಮ ನಾಯಕರು, ಹಾಗಾಗಿ ಅವರನ್ನು ಏಕೆ ಬೇರ್ಪಡಿಸಬೇಕು? ನಾವು ಅವರನ್ನು ಆರಂಭಿಕರಾಗಿ ಮುಂದುವರಿಸುತ್ತೇವೆ ಎಂದಿದ್ದಾರೆ.
ಮಾಲಿಂಗ ಅನುಪಸ್ಥಿತಿಯ ಬಗ್ಗೆ ಮಾತನಾಡಿದ ರೋಹಿತ್, ಯಾರಿಗಾದರೂ ಅವರ ಜಾಗವನ್ನು ತುಂಬಲು ಕಷ್ಟ. ಅವರು ಮುಂಬೈ ಮತ್ತು ಶ್ರೀಲಂಕಾ ತಂಡಕ್ಕೆ ಮಾಡಿರುವ ಸಾಧನೆ ಗಮನಾರ್ಹವಾಗಿದೆ. ಅವರು ಮುಂಬೈ ತಂಡಕ್ಕೆ ಗೆಲುವು ತಂದುಕೊಡುವ ಬೌಲರ್ ಆಗಿದ್ದರು. ತಂಡ ಕಷ್ಟದಲ್ಲಿರುವಾಗಲೆಲ್ಲಾ ಮಾಲಿಂಗ ನೆರವಾಗುತ್ತಿದ್ದರು. ಖಂಡಿತವಾಗಿಯೂ ನಾವು ಅವರ ಅನುಭವವನ್ನು ತಪ್ಪಿಸಿಕೊಳ್ಳಲಿದ್ದೇವೆ. ಟೂರ್ನಿಯಲ್ಲಿ ನಥನ್ ಕೌಲ್ಟರ್-ನೈಲ್, ಜೇಮ್ಸ್ ಪ್ಯಾಟಿನ್ಸನ್ ಮತ್ತು ಧವಲ್ ಕುಲಕರ್ಣಿ ಅವರನ್ನು ಬದಲಿಯಾಗಿ ಬಳಸಿಕೊಳ್ಳಬಹುದು. ಆದರೆ ಮುಂಬೈ ತಂಡದಲ್ಲಿ ಮಾಲಿಂಗ ಸ್ಥಾನವನ್ನು ಎಂದಿಗೂ ತುಂಬಲಾಗುವುದಿಲ್ಲ ಎಂದಿದ್ದಾರೆ.
ಮಾಲಿಂಗ ಮುಂಬೈ ಪರ 122 ಪಂದ್ಯಗಳನ್ನಾಡಿದ್ದು 170 ವಿಕೆಟ್ ಪಡೆದಿದ್ದಾರೆ. ಇದು ಐಪಿಎಲ್ನಲ್ಲಿ ಗರಿಷ್ಠ ವಿಕೆಟ್ ಆಗಿದೆ. ಈ ಬಾರಿ ಅವರು ವೈಯಕ್ತಿಕ ಕಾರಣಗಳಿಂದ ಐಪಿಎಲ್ನಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ. ಅವರ ಬದಲಿಗೆ ಆಸ್ಟ್ರೇಲಿಯಾದ ಜೇಮ್ಸ್ ಪ್ಯಾಟಿನ್ಸನ್ ತಂಡ ಸೇರಿಕೊಂಡಿದ್ದಾರೆ. ಹಾಲಿ ಚಾಂಪಿಯನ್ಸ್ ಮುಂಬೈ ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಉದ್ಘಾಟನಾ ಪಂದ್ಯವನ್ನಾಡಲಿದೆ.