ಮುಂಬೈ: ಮೇಘಾಲಯ ತಂಡದ ಅಭಯ್ ನೇಗಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.
ಮಿಜೋರಾಂ ವಿರುದ್ಧ ನಡೆದ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಅಭಯ್ ನೇಗಿ 14 ಎಸೆತಗಳಲ್ಲಿ ಸತತ 4 ಸಿಕ್ಸರ್ ಸೇರಿ 6 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿ ಅರ್ಧಶತಕ ಪೂರೈಸಿದರು. ಈ ಮೂಲಕ ನೇಗಿ ಸಯ್ಯದ್ ಮುಷ್ತಾಕ್ ಅಲಿ ಇತಿಹಾಸದಲ್ಲಿ ವೇಗದ ಅರ್ಧಶತಕ ಸಿಡಿಸಿದ ಶ್ರೇಯಕ್ಕೆ ಪಾತ್ರರಾದರು.
ಈ ದಾಖಲೆ ಮೊದಲು ಕರ್ನಾಟಕದ ರಾಬಿನ್ ಉತ್ತಪ್ಪ 15 ಎಸೆತಗಳಲ್ಲಿ ಈ ಹಿಂದೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವೇಗದ ಅರ್ಧಶತಕ ದಾಖಲಿಸಿದ್ದರು. ನೇಗಿ ಉತ್ತಪ್ಪ ದಾಖಲೆ ಮುರಿದು ಮತ್ತೊಬ್ಬ ಕನ್ನಡಿಗ ಕೆಎಲ್ ರಾಹುಲ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ರಾಹುಲ್ ಕೂಡ 14 ಎಸೆತಗಳಲ್ಲಿ ಐಪಿಎಲ್ನಲ್ಲಿ ಅರ್ಧಶತಕ ದಾಖಲಿಸಿದ್ದಾರೆ.
ಉತ್ತರಖಂಡ್ ಮೂಲದ 27 ವರ್ಷದ ಅಭಯ್ ನೇಗಿ ಕಳೆದ ವರ್ಷವಷ್ಟೇ ಮೇಘಾಲಯ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮೇಘಾಲಯ 2018ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಅರ್ಹತೆ ಪಡೆದುಕೊಂಡಿತ್ತು.