ಹ್ಯಾಮಿಲ್ಟನ್: ಟೆಸ್ಟ್ ಸರಣಿಗೂ ಮುನ್ನ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಇಲೆವೆನ್ ವಿರುದ್ಧ ಕನ್ನಡಿಗ ಅಗರ್ವಾಲ್ ಹಾಗೂ ರಿಷಭ್ ಪಂತ್ ಸ್ಫೋಟಕ ಆಟ ನಡೆಸಿ ಫಾರ್ಮ್ಗೆ ಮರಳಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಅಗರ್ವಾಲ್ 1 ರನ್‌ಗೆ ಹಾಗೂ ಪಂತ್ 7 ರನ್‌ಗೆ ವಿಕೆಟ್ ಒಪ್ಪಿಸಿ ನಿರಾಶೆ ಅನುಭವಿಸಿದ್ದರು. ಇದರ ಬೆನ್ನಲ್ಲೇ ಟೀಕೆಗೂ ಗುರಿಯಾಗಿದ್ದರು. ಆದರೆ, 2ನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಈ ಇಬ್ಬರು ಟೆಸ್ಟ್ ಪಂದ್ಯದಲ್ಲೂ ಟಿ20ಯಂತೆ ಬ್ಯಾಟಿಂಗ್ ನಡೆಸಿ ಅಬ್ಬರಿಸಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ 28 ರನ್ಗಳ ಮುನ್ನಡೆ ಪಡೆದು 2ನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಕಳೆದುಕೊಂಡು 152 ರನ್ಗಳಿಸಿತು. ಆರಂಭಿಕರಾದ ಮಯಾಂಕ್(81) ಹಾಗೂ ಪೃಥ್ವಿ ಶಾ ಮೊದಲ ವಿಕೆಟ್ಗೆ 9.5 ಓವರ್ಗಳಲ್ಲಿ 72 ರನ್ ಸೇರಿಸಿ ಸ್ಫೋಟಕ ಆರಂಭ ನೀಡಿದರು. ಯುವ ಬ್ಯಾಟ್ಸ್ಮನ್ ಶಾ 31 ಎಸೆತಗಳಲ್ಲಿ 39 ರನ್ಗಳಿಸಿ ಔಟಾದರು. ನಂತರ ಬಂದ ಶುಬ್ಮನ್ ಗಿಲ್ ಕೇವಲ 8 ರನ್‌ಗೆ ವಿಕೆಟ್ ಒಪ್ಪಿಸಿದರು.
ಆದರೆ, 3ನೇ ವಿಕೆಟ್ಗೆ ಮಯಾಂಕ್ ಜೊತೆಯಾದ ಪಂತ್ 134 ರನ್ ಸೇರಿಸಿದರು. ಅಗರ್ವಾಲ್ 99 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸೇರಿ 81 ರನ್ ಗಳಿಸಿ ನಿವೃತ್ತಿಯಾದರು. ಬೌಂಡರಿ ಸಿಕ್ಸರ್ ಸುರಿಮಳೆ ಸುರಿಸಿದ ಪಂತ್ ಕೇವಲ 65 ಎಸೆತಗಳಲ್ಲಿ ತಲಾ 4 ಬೌಂಡರಿ ಸಿಕ್ಸರ್ ಸಹಿತ 70 ರನ್ಗಳಿಸಿ ಔಟಾದರು. ಮತ್ತೊಬ್ಬ ವಿಕೆಟ್ ಕೀಪರ್ ಸಹ ಔಟಾಗದೆ 30, ಅಶ್ವಿನ್ ಔಟಾಗದೆ 16 ರನ್ ಗಳಿಸಿದರು. ನಾಯಕ ಕೊಹ್ಲಿ ಎರಡೂ ಇನ್ನಿಂಗ್ಸ್ನಲ್ಲೂ ಬ್ಯಾಟಿಂಗ್ ನಡೆಸಲಿಲ್ಲ.
ಮೊದಲ ಇನ್ನಿಂಗ್ಸ್ನಲ್ಲಿ ಭಾರತ ವಿಹಾರಿ ಶತಕ(101) ಹಾಗೂ ಪೂಜಾರ ಅವರ 93 ರನ್ಗಳ ನೆರವಿನಿಂದ 263 ರನ್ಗಳಿಸಿತ್ತು. ಇದಕ್ಕುತ್ತರವಾಗಿ ನ್ಯೂಜಿಲ್ಯಾಂಡ್ 235 ರನ್ಗಳಿಗೆ ಆಲೌಟ್ ಆಗಿತ್ತು. ಉತ್ತಮವಾಗಿ ಬೌಲಿಂಗ್ ನಡೆಸಿದ್ದ ಶಮಿ 3 ವಿಕೆಟ್, ಬುಮ್ರಾ, ಉಮೇಶ್ ಯಾದವ್, ಸೈನಿ ತಲಾ ಎರಡು ವಿಕೆಟ್ ಪಡೆದಿದ್ದರು.