ಬರ್ಮಿಂಗ್ಹ್ಯಾಮ್:ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಈಗಾಗಲೇ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದ್ದು, ಲೀಗ್ ಹಂತದಲ್ಲಿ ಶ್ರೀಲಂಕಾ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಲಿದೆ. ಸೆಮೀಸ್ನಲ್ಲಿ ಬಲಿಷ್ಠ ತಂಡಗಳನ್ನ ಎದುರಿಸಬೇಕಾದರೆ ಕೊಹ್ಲಿ ಪಡೆ ಕೂಡ ಎಲ್ಲ ವಿಭಾಗಗಳಲ್ಲೂ ಸದೃಢವಾಗಿರಬೇಕಾಗಿದ್ದು, ಅದನ್ನ ಗಮನದಟ್ಟಿಕೊಂಡು ಸಿಂಹಳೀಯರ ವಿರುದ್ಧ ನಡೆಯುವ ಕೊನೆ ಲೀಗ್ ಪಂದ್ಯದಲ್ಲಿ ಕೆಲವೊಂದು ಮಹತ್ವದ ಪ್ರಯೋಗ ನಡೆಸುವ ಸಾಧ್ಯತೆ ದಟ್ಟವಾಗಿದೆ.
ವಿಶ್ವಕಪ್ನಿಂದ ವಿಜಯ್ ಶಂಕರ್ ಔಟಾಗುತ್ತಿದ್ದಂತೆ ಆ ಸ್ಥಾನಕ್ಕೆ ಒಂದೇ ಒಂದು ಏಕದಿನ ಪಂದ್ಯವನ್ನಾಡದ ಮಯಾಂಕ್ ಅಗರವಾಲ್ಗೆ ಆಯ್ಕೆ ಸಮಿತಿ ಮಣೆ ಹಾಕಿದೆ. ಆದರೆ, ಇದರ ಹಿಂದೆ ಅನೇಕ ಗೇಮ್ಪ್ಲಾನ್ ಅಡಗಿವೆ ಎಂಬುದು ಇದೀಗ ಬಹಿರಂಗಗೊಳ್ಳುತ್ತಿದೆ.
ಏನು ಈ ಗೇಮ್ ಪ್ಲಾನ್!?
ವಿಶ್ವಕಪ್ನ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬಲಿಷ್ಠ ಇಂಗ್ಲೆಂಡ್ ಅಥವಾ ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಾಟ ನಡೆಸಲಿದ್ದು, ಇಲ್ಲಿ ಟೀಂ ಇಂಡಿಯಾದ ಆರಂಭಿಕ ಜೋಡಿ ಉತ್ತಮ ರನ್ಗಳಿಕೆ ಮಾಡುವುದು ಅವಶ್ಯವಾಗಿರುತ್ತದೆ. ಹೀಗಾಗಿ ರೋಹಿತ್ ಶರ್ಮಾ ಜತೆ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್ಮನ್ ಮಯಾಂಕ್ ಅಗರವಾಲ್ಗೆ ಅವಕಾಶ ನೀಡಬಹುದಾಗಿದೆ. ಉಳಿದಂತೆ ಕೆ.ಎಲ್. ರಾಹುಲ್ಗೆ ಈ ಹಿಂದಿನ 4ನೇ ಸ್ಥಾನದಲ್ಲಿ ಆಡಲು ಅವಕಾಶ ಮಾಡಿಕೊಡುವುದು ಕೊಹ್ಲಿ ಹಾಗೂ ಶಾಸ್ತ್ರಿಯ ಗೇಮ್ ಪ್ಲಾನ್ ಆಗಿದೆ.
ಶಿಖರ್ ಧವನ್ ಗಾಯಗೊಂಡು ಹೊರ ಬೀಳುತ್ತಿದ್ದಂತೆ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಿರುವ ಕೆಎಲ್ 57,30,48,0 ಹಾಗೂ 77ರನ್ಗಳಿಕೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 4ನೇ ಸ್ಥಾನದಲ್ಲಿ ಬ್ಯಾಟ್ ಬೀಸಿದ ಕೆಎಲ್ 26ರನ್ ಗಳಿಕೆ ಮಾಡಿದ್ದರು. ಇನ್ನು ಈ ಹಿಂದಿನ ಎಲ್ಲ ಪಂದ್ಯಗಳನ್ನ ನೋಡಿದಾಗ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ರನ್ಗಳಿಕೆ ಮಾಡಲು ಹರಸಾಹಸ ಪಡುತ್ತಿದೆ. ಹೀಗಾಗಿ ಕೆಎಲ್ಗೆ ಈ ಹಿಂದಿನ 4ನೇ ಕ್ರಮಾಂಕ ಬಿಟ್ಟುಕೊಡಲು ಟೀಂ ಇಂಡಿಯಾ ಪ್ಲಾನ್ ರೂಪಿಸಿಕೊಂಡಿದೆ ಎನ್ನಲಾಗಿದೆ.
ಈಗಾಗಲೇ ಇಂಗ್ಲೆಂಡ್ನ ಮೈದಾನಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಮಯಾಂಕ್ ಅಗರವಾಲ್, ಇಂಡಿಯಾ ಎ, ತ್ರಿಕೋನ ಸರಣಿಗಳಲ್ಲಿ ಅತಿ ಹೆಚ್ಚು ರನ್ಗಳಿಕೆ ಮಾಡಿದ್ದಾರೆ. ವೇಗದ ಬೌಲರ್ಗಳ ಎದುರು ನಿರಾಯಾಸವಾಗಿ ಬ್ಯಾಟ್ ಬೀಸುವ ಕಲೆ ಇವರಿಗೆ ಕರಗತವಾಗಿದೆ. ಕರ್ನಾಟಕದ ರನ್ ಮಷಿನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಯಾಂಕ್ ಈಗಾಗಲೇ ಲಿಸ್ಟ್ A ಕ್ರಿಕೆಟ್ನಲ್ಲಿ 12 ಶತಕ ಹಾಗೂ 14 ಅರ್ಧಶತಕ ಸಿಡಿಸಿದ್ದಾರೆ. ಜತೆಗೆ ಮಿಚಲ್ ಸ್ಟಾರ್ಕ್,ಪ್ಯಾಟ್ ಕಮ್ಮಿನ್ಸ್ರಂತಹ ಬೌಲರ್ಗಳನ್ನ ಮಯಾಂಕ್ ಸುಲಭವಾಗಿ ಎದುರಿಸಿದ್ದಾರೆ. ಹೀಗಾಗಿ ಅವರಿಗೆ ಲಂಕಾ ವಿರುದ್ಧದ ಪಂದ್ಯದಲ್ಲಿ ಅವಕಾಶ ನೀಡಿ ತಂಡ ಹೊಸ ಪ್ರಯೋಗ ಮಾಡುವ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತಿದೆ.