ಸಿಡ್ನಿ :ಮೊನಚು ಕಾಣದ ಭಾರತೀಯ ಬೌಲಿಂಗ್ ದಾಳಿಯನ್ನು ಮನಬಂದಂತೆ ದಂಡಿಸಿದ ಮ್ಯಾಕ್ಸ್ವೆಲ್ ಹಾಗೂ ಮ್ಯಾಥ್ಯೂ ವೇಡ್ ಆಕರ್ಷಕ ಅರ್ಧಶತಕ ಸಿಡಿಸಿ ಭಾರತಕ್ಕೆ ಬೃಹತ್ ಮೊತ್ತದ ಟಾರ್ಗೆಟ್ ನೀಡಲು ನೆರವಾಗಿದ್ದಾರೆ.
ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಎರಡನೇ ಓವರ್ನಲ್ಲೇ ವಾಷಿಂಗ್ಟನ್ ಸುಂದರ್ ಆಸ್ಟ್ರೇಲಿಯಾ ನಾಯಕ ಫಿಂಚ್ ವಿಕೆಟ್ ಪಡೆದು ಭಾರತಕ್ಕೆ ಮುನ್ನಡೆ ತಂದುಕೊಟ್ಟರು.
ಆದರೆ, ಮ್ಯಾಥ್ಯೂ ವೇಡ್ ಮತ್ತು ಸ್ಮಿತ್ 2ನೇ ವಿಕೆಟ್‌ಗೆ 65 ರನ್ಗಳ ಜೊತೆಯಾಟ ನೀಡಿ ಆರಂಭಿಕ ಆಘಾತದಿಂದ ಪಾರು ಮಾಡಿದರು. ಸ್ಮಿತ್ 23 ಎಸೆತಗಳಲ್ಲಿ 24 ರನ್ಗಳಿಸಿ ಔಟಾದರು. ನಂತರ ವೇಡ್ ಜೊತೆಗೂಡಿದ ಮ್ಯಾಕ್ಸ್ವೆಲ್ ಸಿಕ್ಕ ಎರಡು ಜೀವದಾನಗಳನ್ನು ಸದುಪಯೋಗಪಡಿಸಿಕೊಂಡು ಕೇವಲ 36 ಎಸೆತಗಳಲ್ಲಿ ತಲಾ 3 ಬೌಂಡರಿ ಮತ್ತು ಸಿಕ್ಸರ್ಗಳೊಂದಿಗೆ 54 ರನ್ ಸಿಡಿಸಿದರು. ಅಲ್ಲದೆ ವೇಡ್ ಜೊತೆ 3ನೇ ವಿಕೆಟ್‌ಗೆ 90 ರನ್ಗಳ ಜೊತೆಯಾಟ ನಡೆಸಿದರು.
ವೇಡ್ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 80 ರನ್ಗಳಿಸಿ ಠಾಕೂರ್ಗೆ ವಿಕೆಟ್ ಒಪ್ಪಿಸಿದರು. ಡಾರ್ಸಿ ಶಾರ್ಟ್ 7, ಹೆನ್ರಿಕ್ಸ್ ಅಜೇಯ 5, ಸ್ಯಾಮ್ಸ್ ಅಜೇಯ 4 ರನ್ ಗಳಿಸಿದರು. ಭಾರತದ ಪರ ವಾಷಿಂಗ್ಟನ್ ಸುಂದರ್ 34ಕ್ಕೆ 2, ನಟರಾಜನ್ 33ಕ್ಕೆ1, ಶಾರ್ದುಲ್ ಠಾಕೂರ್ 43ಕ್ಕೆ 1 ವಿಕೆಟ್ ಪಡೆದರು.