ಇಂದೋರ್:ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶ ಈಗಾಗಲೇ ಟಿ20 ಸರಣಿ ಕೈಚೆಲ್ಲಿದ್ದು, ಟೆಸ್ಟ್ ಸರಣಿ ನಾಳಿನಿಂದ ಆರಂಭವಾಗುತ್ತಿದೆ.
ಟೆಸ್ಟ್ ಮಾದರಿಯಲ್ಲಿ ತವರಿನ ಪಿಚ್ನಲ್ಲಿ ಅಕ್ಷರಶಃ ಅಬ್ಬರಿಸುತ್ತಿರುವ ಕೊಹ್ಲಿ ಟೀಂ ನಾಳಿನಿಂದ ಆರಂಭವಾಗುತ್ತಿರುವ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ. ಇಷ್ಟಾಗಿಯೂ ಬಾಂಗ್ಲಾ ಹುಡುಗರು ಭಾರತಕ್ಕೆ ಟಕ್ಕರ್ ನೀಡಲು ಸಿದ್ಧತೆ ನಡೆಸಿದ್ದಾರೆ.
ಕಳೆದ ಐದು ಟೆಸ್ಟ್ ಪಂದ್ಯದಲ್ಲಿ ಭಾರತ ಯಾವುದೇ ಪಂದ್ಯದಲ್ಲೂ ಸೋಲು ಕಂಡಿಲ್ಲ. ಇದಲ್ಲದೆ ವಿಶ್ವ ಟೆಸ್ಟ ಚಾಂಪಿಯನ್ಶಿಪ್ನಲ್ಲಿ 240 ಅಂಕದೊಂದಿಗೆ ಭಾರಿ ಅಂತರದಿಂದ ಅಗ್ರಸ್ಥಾನದಲ್ಲಿದೆ.
ಭಾರತ ಕಳೆದ ಏಳು ವರ್ಷದಲ್ಲಿ ತವರಿನಲ್ಲಿ ಟೆಸ್ಟ್ ಸರಣಿಯನ್ನೇ ಸೋತಿಲ್ಲ. 2012ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತವರಿನಲ್ಲಿ ಸರಣಿ ಮುಖಭಂಗ ಅನುಭವಿಸಿತ್ತು. ಅಲ್ಲಿಂದ ಇಲ್ಲಿತನಕ ಭಾರತ ತನ್ನ ನೆಲದಲ್ಲಿ ಏಕೈಕ ಟೆಸ್ಟ್ ಪಂದ್ಯ ಮಾತ್ರ ಸೋತಿದೆ(ಆಸ್ಟ್ರೇಲಿಯ, 2017) ಎನ್ನುವುದು ಗಮನಾರ್ಹ ಸಂಗತಿ.
ಇತ್ತ ಪ್ರವಾಸಿ ಬಾಂಗ್ಲಾದೇಶ ಕಳೆದ ಐದು ಟೆಸ್ಟ್ನಲ್ಲಿ ಮೂರು ಸೋಲು ಹಾಗೂ ಎರಡು ಗೆಲುವು ಕಂಡಿದೆ. ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಇನ್ನೂ ಖಾತೆಯನ್ನೇ ತೆರೆದಿಲ್ಲ. ಇಲ್ಲಿ ಭಾರತಕ್ಕೆ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅಂತರ ಹಿಗ್ಗಿಸುವ ಪ್ರಯತ್ನವಾದರೆ ಬಾಂಗ್ಲಾ ಖಾತೆ ತೆರೆಯಲು ಹೋರಾಟ ನಡೆಸಲಿದೆ.
ಟೀಂ ಇಂಡಿಯಾ ನಾಳಿನ ಪಂದ್ಯದಲ್ಲಿ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಟ್ಟಾರೆ ಐವರು ಬೌಲರ್ಗಳ ಕಾಂಬಿನೇಷನ್ನಲ್ಲಿ ಬಾಂಗ್ಲಾ ಆಟಗಾರರನ್ನು ಕಟ್ಟಿಹಾಕಲು ಮೈದಾನಕ್ಕಿಳಿಯಲಿದೆ.
ಪಿಚ್ ಹೇಗಿದೆ..?
ಇಂದೋರ್ನ ಹೋಳ್ಕರ್ ಕ್ರಿಕೆಟ್ ಮೈದಾನ ಬ್ಯಾಟ್ಸ್ಮನ್ಗಳಿಗೆ ಪೂರಕವಾಗಿರಲಿದೆ. ಕೊಂಚ ಹುಲ್ಲಿರಲಿದ್ದು, ಬೌನ್ಸ್ ಹೊರತಾಗಿಯೂ ದಾಂಡಿಗರು ಮಿಂಚಲಿದ್ದಾರೆ. ವೇಗಿಗಳು ವಿಕೆಟ್ ಕೀಳುವ ಸಾಧ್ಯತೆ ಹೆಚ್ಚಾಗಿದೆ.