ಅಡಿಲೇಡ್: ಅಡಿಲೇಡ್ ಓವೆಲ್‌ನಲ್ಲಿ ನಡೆಯಲಿರುವ ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡಕ್ಕೆ ಮಾರ್ಕಸ್ ಹ್ಯಾರಿಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ.
ಗಾಯದ ಕಾರಣದಿಂದಾಗಿ ಡೇವಿಡ್ ವಾರ್ನರ್ ಮತ್ತು ವಿಲ್ ಪುಕೋವ್ಸ್ಕಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದು, ಮಾರ್ಕಸ್ ಹ್ಯಾರಿಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಾರ್ನರ್ ಗಾಯಕ್ಕೆ ತುತ್ತಾಗಿದ್ದರು. ಕಳೆದ ವಾರ ನಡೆದ ಮೊದಲ ಅಭ್ಯಾಸ ಪಂದ್ಯದ ವೇಳೆ ಕಾರ್ತಿಕ್ ತ್ಯಾಗಿ ಎಸೆದ ಚೆಂಡು ಬಡಿದು ಪುಕೋವ್ಸ್ಕಿ ಗಾಯಗೊಂಡಿದ್ದರು.
"ಆಟಗಾರರ ಗಾಯದ ಕಾರಣದಿಂದಾಗಿ ಮಾರ್ಕಸ್ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಮಾರ್ಕಸ್ ಈ ಋತುವಿನಲ್ಲಿ ವಿಕ್ಟೋರಿಯಾ ಪರ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅಲ್ಲದೆ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳನ್ನು ಎದುರಿಸಿದ್ದಾರೆ" ಎಂದು ನ್ಯಾಷನಲ್ ಸೆಲೆಕ್ಟರ್ ಟ್ರೆವರ್ ಹೊನ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.