ಕ್ಯಾನ್ಬೆರಾ :ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಈಗಾಗಲೇ ಏಕದಿನ ಸರಣಿ ಕಳೆದುಕೊಂಡಿದೆ. ಇಂದು ನಡೆಯುತ್ತಿರುವ 3ನೇ ಪಂದ್ಯ ಔಪಚಾರಿಕವಾಗಿದ್ದು, ಕೇವಲ ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿಕೊಳ್ಳಲು ಮಾತ್ರ ಆಡುತ್ತಿದೆ.
ಇಂದಿನ ಪಂದ್ಯದಲ್ಲಿ ಭಾರತ ತಂಡ ಕೆಲವು ಬದಲಾವಣೆ ಮಾಡಿಕೊಂಡಿದೆ. ಬೆಂಚ್ ಕಾದಿರುವ ಆಟಗಾರರಿಗೆ ಅವಕಾಶ ನೀಡಿದೆ. ಆದರೆ, ಕನ್ನಡಿಗ ಮನೀಶ್ ಪಾಂಡೆಗೆ ಮಾತ್ರ ಒಂದೂ ಅವಕಾಶ ನೀಡದಿರುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗ ದೊಡ್ಡ ಗಣೇಶ್ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಗಣೇಶ್, ಔಪಚಾರಿಕವಾಗಿರುವ ಪಂದ್ಯದಲ್ಲೂ ಮನೀಶ್ ಪಾಂಡೆಗೆ ಅವಕಾಶ ನೀಡದಿದ್ದರೆ, ಅವರು 15ರ ಬಳಗದಲ್ಲಿ ಇದ್ದು ಏನು ಪ್ರಯೋಜನ, ಕಳೆದ 2 ವರ್ಷಗಳಲ್ಲಿ ಆತ ಕೇವಲ 3 ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ " ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.