ಕರಾಚಿ:ಹಿರಿಯ ಕ್ರಿಕೆಟಿಗರಾದ ಶೋಯಬ್ ಮಲಿಕ್, ಮೊಹಮ್ಮದ್ ಹಫೀಜ್, ವಹಾಬ್ ರಿಯಾಜ್ ಮತ್ತು ಮೊಹಮ್ಮದ್ ಅಮೀರ್ ಪಿಸಿಬಿಯಿಂದ ಕೇಂದ್ರ ಗುತ್ತಿಗೆಯಲ್ಲಿ ಅವಕಾಶ ಪಡೆಯದಿದ್ದರೂ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಎ ಕೆಟಗರಿಯ ಆಟಗಾರರಿಗೆ ನೀಡುವ ವೇತನವನ್ನು ಪಡೆಯಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮೂಲಗಳಿಂದ ತಿಳಿದು ಬಂದಿದೆ.
2020ರ ಕೇಂದ್ರ ಗುತ್ತಿಗೆಯ ಒಪ್ಪಂದಗಳನ್ನು ಹೊಂದಿರದ ಕಾರಣ ಅವರು ಪ್ರಸ್ತುತ ಎ ವಿಭಾಗದಲ್ಲಿ ಪಂದ್ಯದ ಶುಲ್ಕವನ್ನು ಸ್ವೀಕರಿಸುತ್ತಾರೆ ಎಂದು ಪಿಸಿಬಿ ಮೂಲಗಳಿಂದ ತಿಳಿದು ಬಂದಿದೆ.
ಇದಕ್ಕೂ ಮೊದಲು ಅವರು ಕೇಂದ್ರ ಗುತ್ತಿಗೆ ಪಡೆಯಲು ವಿಫಲರಾಗಿರುವುದರಿಂದ ಅವರು ಆಡುವ ಪಂದ್ಯಗಳಲ್ಲಿ ಸಿ ವಿಭಾಗದ ಆಟಗಾರರಿಗೆ ನೀಡುವ ವೇತನ ನೀಡಲಾಗುತ್ತಿತ್ತು. ಅಂದರೆ ಏಕದಿನ ಪಂದ್ಯಕ್ಕೆ 2,02,000 ಪಿಕೆಆರ್ ಹಾಗೂ ಟಿ-20 ಪಂದ್ಯಕ್ಕೆ ಅದಕ್ಕಿಂತಲೂ ಕಡಿಮೆ ವೇತನ ನೀಡಲಾಗುತ್ತಿತ್ತು. ಈ ಕಾರಣದಿಂದ ಮಂಡಳಿ ವಿರುದ್ಧ ಹಲವು ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ಮೂಲಗಳ ಪ್ರಕಾರ ಈ ನಾಲ್ವರು ಎ ವಿಭಾಗಕ್ಕೆ ನೀಡುವಷ್ಟೇ ಪಂದ್ಯದ ವೇತನವನ್ನು ಪಡೆಯಲಿದ್ದಾರೆ. ಏಕದಿನ ಪಂದ್ಯವೊಂದಕ್ಕೆ 4,60,000 ಹಾಗೂ ಟಿ-20 ಪಂದ್ಯಕ್ಕೆ 3,30,000 ಪಿಕೆಆರ್ ಪಡೆಯಲಿದ್ದಾರೆ.
ಆದಾಗ್ಯೂ ರಾಷ್ಟ್ರೀಯ ಕರ್ತವ್ಯದ ಕಾರಣದಿಂದಾಗಿ ವಿದೇಶಿ ಟಿ-20 ಲೀಗ್ ಒಪ್ಪಂದಗಳನ್ನು ಕಳೆದುಕೊಂಡಿದ್ದಕ್ಕಾಗಿ ಅವರಿಗೆ ಸ್ವಲ್ಪ ಪರಿಹಾರವನ್ನು ನೀಡಬೇಕೆಂದು ಆಟಗಾರರಿಂದ ಸಲ್ಲಿಸಿದ್ದ ವಿನಂತಿಯನ್ನು ಮಂಡಳಿ ಸ್ವೀಕರಿಸಲಿಲ್ಲ. ರಾಷ್ಟ್ರೀಯ ಕರ್ತವ್ಯಕ್ಕೆ ಆದ್ಯತೆ ನೀಡಿರುವುದಕ್ಕೆ ಪರಿಹಾರ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದೆ.