ರಾಂಚಿ: ಭಾರತೀಯ ಕ್ರಿಕೆಟ್ ಇತಿಹಾಸದ ಪುಟದಲ್ಲಿ ಎಂ.ಎಸ್.ಧೋನಿ ಅತ್ಯಂತ ಯಶಸ್ವಿ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಅವರು ಕ್ರೀಸ್ನಲ್ಲಿ ಇರುವವರೆಗೂ ಭಾರತ ಯಾವುದೇ ಹಂತದಲ್ಲೂ ಸೋಲು ಕಾಣದು ಅನ್ನೋದು ಅಭಿಮಾನಿಗಳ ಕಟ್ಟಾ ನಂಬಿಕೆ. ಆದರೆ ಇದೀಗ ಕ್ರಿಕೆಟ್ಗೆ ವಿದಾಯ ಹೇಳುವ ಮೂಲಕ ಕ್ಯಾಪ್ಟನ್ ಕೂಲ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಧೋನಿ ಯುಗ ಆರಂಭ ಹೀಗಿತ್ತು..
ಧೋನಿ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅಂದರೆ ಸರಿಯಾಗಿ 15 ವರ್ಷದ ಹಿಂದೆ ಏಕದಿನ ಕ್ರಿಕಟ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಅವರು ಸಂಭ್ರಮಿಸಿದ್ದರು. ಅಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು 123 ಎಸೆತದಲ್ಲಿ 148 ರನ್ಗಳಿಸಿದ್ದರು. ಈ ಪಂದ್ಯದ ಬಳಿಕ ಧೋನಿ ಮತ್ತೆಂದೂ ಹಿಂದಿರುಗಿ ನೋಡಲೇ ಇಲ್ಲ.
ಧೋನಿ ಹಿಂದಿತ್ತು 7ರ ಗುಟ್ಟು:
ಎಂಎಸ್‌ಡಿ ಕ್ರಿಕೆಟ್ಗೆ ಕಾಲಿಟ್ಟ ಕೆಲವೇ ಪಂದ್ಯಗಳಲ್ಲಿ ಫೇಮಸ್ ಆಗಿಬಿಟ್ಟಿದ್ದರು. ಅವರ ಯಶಸ್ಸಿನಲ್ಲಿ ಕೆಲವು ಸಂಖ್ಯೆಗಳು ಸಹ ಪ್ರಮುಖ ಎನಿಸಿವೆ. ಅವರ ಅದೃಷ್ಟ ಸಂಖ್ಯೆ 7 ಆಗಿತ್ತು. ಮೈದಾನದಲ್ಲೂ 7 ನೇ ನಂಬರ್ ಜರ್ಸಿ ತೊಟ್ಟು ಆಡುತ್ತಿದ್ದರು. ಇದಲ್ಲದೆ ನೆಚ್ಚಿನ ಕಾರಿನ ಸಂಖ್ಯೆಯೂ ಕೂಡಾ 7. ಕ್ರಿಕೆಟ್ ಜೀವನದ ಆರಂಭದಲ್ಲಿ 7ನೇ ಸ್ಥಾನದಲ್ಲಿಯೂ ಅವರು ಬ್ಯಾಟಿಂಗ್ಗೆ ಇಳಿಯುತ್ತಿದ್ದರು.
ಅತ್ಯಂತ ಸಹನೆಯ ಕ್ರಿಕೆಟಿಗನ ಕ್ರಿಕೆಟ್ ಜೀವನ ಬಾಂಗ್ಲಾದೇಶದ ವಿರುದ್ಧ ಆರಂಭವಾಗಿತ್ತು. ಆದರೆ ಮೊದಲ ನಾಲ್ಕು ಪಂದ್ಯಗಳಲ್ಲಿ ಅವರು ರನ್ ಗಳಿಸಲು ಪರದಾಡಿದ್ದರು. ಆ ಸಂದರ್ಭದಲ್ಲಿ ಕ್ರಮವಾಗಿ 0,12,7,3 ರನ್ಗಳಿಸಿ ಔಟ್ ಆಗಿ ಪೆವಿಲಿಯನ್ ಸೇರಿದ್ದರು.
ನಂತರ ಅಂದಿನ ನಾಯಕ ಸೌರವ್ ಗಂಗೂಲಿ ಪಾಕಿಸ್ತಾನದ ಪಂದ್ಯದಲ್ಲಿ ಧೋನಿಯನ್ನು ಹುರಿದುಂಬಿಸಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಿದ್ದರು. ಇದೇ ಪಂದ್ಯ ಧೋನಿಯ ಭವಿಷ್ಯದ ಜೊತೆ ಭಾರತ ತಂಡದ ದಿಕ್ಕನ್ನೇ ಬದಲಿಸಿ ಬಿಟ್ಟತು.
ಮರೆಯಲಾಗದ ಧೋನಿ ಇನ್ನಿಂಗ್ಸ್:
ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಧೋನಿ 183ರನ್ ಗಳಿಸಿ ಮಿಂಚಿದ್ದರು. ಅಬ್ಬರದ ಬ್ಯಾಟಿಂಗ್ ನಡೆಸಿದ ಧೋನಿ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಬೌಂಡರಿ ಅಟ್ಟಿದ್ದರು. ಇನ್ನೂ ಇದು ಅವರ ವೈಯಕ್ತಿಕ ಅತ್ಯಧಿಕ ಸ್ಕೋರ್ ಎನಿಸಿಕೊಂಡಿದೆ.