ಅಬುಧಾಬಿ: ಲೂಕಿ ಫರ್ಗ್ಯುಸನ್ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ಕೆಕೆಆರ್ ತಂಡ ಸೂಪರ್ ಓವರ್ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಮಣಿಸಿ ಗೆಲುವಿನ ಹಾದಿಗೆ ಮರಳಿದೆ.
164 ರನ್ಗಳ ಗುರಿ ಪಡೆದಿದ್ದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 163 ರನ್ಗಳಿಸುವ ಮೂಲಕ ಟೈ ಸಾಧಿಸಿತು. ಆದರೆ ಹೈದರಾಬಾದ್ ತಂಡ ಫರ್ಗ್ಯುಸನ್ ಎಸೆದ ಸೂಪರ್ ಓವರ್ನಲ್ಲಿ ಕೇವಲ 3 ಎಸೆತಗಳಲ್ಲಿ 2 ರನ್ಗಳಿಸಿ 2 ವಿಕೆಟ್ ಕಳೆದುಕೊಂಡಿತು. 3 ರನ್ಗಳ ಗುರಿಯನ್ನು ಕೆಕೆಆರ್ 4 ಎಸೆತಗಳಲ್ಲಿ ತಲುಪಿ ಜಯ ಸಾಧಿಸಿತು.
ಇದೇ ಮೊದಲ ಬಾರಿಗೆ ಬ್ಯಾಟಿಂಗ್ ಬದಲಾವಣೆ ಮಾಡಿಕೊಂಡ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ರನ್ನು ಆರಂಭಿಕನಾಗಿ ಕಣಕ್ಕಿಳಿಸಿತ್ತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಈ ಜೋಡಿ ಮೊದಲ ವಿಕೆಟ್ಗೆ 57 ರನ್ ಸೇರಿಸಿತು. 19 ಎಸೆತಗಳಲ್ಲಿ 29 ರನ್ಗಳಿಸಿ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಇಂದೇ ಮೊದಲ ಪಂದ್ಯವಾಡಿದ ಫರ್ಗ್ಯುಸನ್ ವಿಲಿಯಮ್ಸನ್ ವಿಕೆಟ್ ಪಡೆದರು.
ತಮ್ಮ ಮುಂದಿನ ಓವರ್ನಲ್ಲಿ ಯುವ ಬ್ಯಾಟ್ಸ್ಮನ್ ಪ್ರಿಯಂ ಗರ್ಗ್(4) ರನ್ನು ಕ್ಲೀನ್ ಬೌಲ್ಡ್ ಆದರು. ನಂತರದ ಓವರ್ನಲ್ಲೇ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ರಸೆಲ್ಗೆ ಕ್ಯಾಚ್ ನೀಡಿ ಔಟಾದರು. ಇವರ ಬೆನ್ನಲ್ಲೇ ಬಂದ ಮನೀಶ್ ಪಾಂಡೆ ಫರ್ಗ್ಯುಸನ್ಗೆ 3ನೇ ಬಲಿಯಾದರೆ, ವಿಜಯ ಶಂಕರ್ 7 ರನ್ಗಳಿಸಿ ಕಮ್ಮಿನ್ಸ್ಗೆ ವಿಕೆಟ್ ಒಪ್ಪಿಸಿದರು.