ಮುಂಬೈ: ಭಾರತದ ಮಾಜಿ ಆರಂಭಿಕ ಕ್ರಿಕೆಟಿಗ ಮಾಧವ್ ಆಪ್ಟೆ ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
1950ರ ದಶಕದಲ್ಲಿ ಭಾರತ ತಂಡದ ಆರಂಭಿಕರಾಗಿದ್ದ ಆಪ್ಟೆ ಟೀಂ ಇಂಡಿಯಾ ಪರ 7 ಟೆಸ್ಟ್ ಪಂದ್ಯಗಳನ್ನು ಪ್ರತಿನಿಧಿಸಿದ್ದು, 49.17 ರ ಬ್ಯಾಟಿಂಗ್ ಸರಾಸರಿಯಲ್ಲಿ 542 ರನ್ಗಳಿಸಿದ್ದರು. ಇದರಲ್ಲಿ 2 ಶತಕ ಹಾಗೂ 3 ಅರ್ಧ ಶತಕದ ಸೇರಿದ್ದವು.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 460 ರನ್ ಗಳಿಸುವ ಮೂಲಕ ಭಾರತದ ಪರ ಮೊದಲ ಬಾರಿದ ಸರಣಿಯೊಂದರಲ್ಲಿ 400 ರ ಗಡಿ ದಾಟಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. ಅದೊಂದು ಸರಣಿ ನಂತರ ದೇಶಿ ಕ್ರಿಕೆಟ್ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. ಆದಾಗ್ಯೂ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡದಿರುವುದು ಇಂದಿಗೂ ನಿಗೂಢವಾಗಿಯೇ ಉಳಿದುಕೊಂಡಿದೆ.
71 ವಯಸ್ಸಿನವರೆಗೂ ಕ್ರಿಕೆಟ್ ಆಡುತ್ತಿದ್ದ ಆಪ್ಟೆ ತಮ್ಮ 86ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ, ಯೂಸುಫ್ ಪಠಾಣ್, ವಾಸಿಂ ಜಾಫರ್, ಆದಿತ್ಯ ತಾರೆ ಕಾಮೆಂಟೇಟರ್ ಹರ್ಷ ಬೊಗ್ಲೆ ಸಂತಾಪ ಸೂಚಿಸಿದ್ದಾರೆ.