ಕ್ರೈಸ್ಟ್ಚರ್ಚ್: ಬಾಂಗ್ಲಾದೇಶದ ವಿರುದ್ಧ ಮಂಗಳವಾರ ನಡೆದ 3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯವನ್ನು ಗೆಲ್ಲುವ ಮೂಲಕ ನ್ಯೂಜಿಲ್ಯಾಂಡ್ ತಂಡ ಇನ್ನು ಒಂದು ಪಂದ್ಯವಿರುವಂತೆ ಏಕದಿನ ಸರಣಿ ಜಯಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 50 ಓವರ್ಗಳಲ್ಲಿ ನಾಯಕ ತಮೀಮ್ ಇಕ್ಬಾಲ್ (78), ಮೊಹಮ್ಮದ್ ಮಿಥುನ್ (73)ರ ಅರ್ಧಶತಕಗಳ ನೆರವಿನಿಂದ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 271 ರನ್ ಗಳಿಸಿತ್ತು.
ನ್ಯೂಜಿಲ್ಯಾಂಡ್ ಪರ ಮಿಚೆಲ್ ಸ್ಯಾಂಟ್ನರ್ 2 , ಬೌಲ್ಟ್, ಮ್ಯಾಟ್ ಹೆನ್ರಿ ಮತ್ತು ಜಮೀಸನ್ ತಲಾ ಒಂದು ವಿಕೆಟ್ ಪಡೆದರು.
272 ರನ್ಗಳ ಟಾರ್ಗೆಟ್ ಬೆನ್ನತ್ತಿದ ಕಿವೀಸ್ 48.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪುವ ಮೂಲಕ ಸರಣಿ ವಶಪಡಿಸಿಕೊಂಡಿತು.
ಮಾರ್ಟಿನ್ ಗಪ್ಟಿಲ್ 20, ಹೆನ್ರಿ ನಿಕೋಲ್ಸ್ 13, ಮತ್ತು ವಿಲ್ ಯಂಗ್ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿದರು. 53 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ನಾಯಕ ಲ್ಯಾಥಮ್ ಮತ್ತು ಡಿವೋನ್ ಕಾನ್ವೆ 4ನೇ ವಿಕೆಟ್ ಜೊತೆಯಾಟದಲ್ಲಿ 113 ರನ್ ಸೇರಿಸಿ ಚೇತರಿಕೆ ನೀಡಿದರು. ಕಾನ್ವೆ 93 ಎಸೆತಗಳಲ್ಲಿ 7 ಬೌಂಡರಿ ಸಹಿತ 72 ರನ್ ಗಳಿಸಿ ರನ್ ಔಟ್ ಆದರು.
ನಂತರ ಟಾಮ್ ಲಾಥಮ್ ಜೊತೆಯಾದ ನೀಶಮ್(30) 5ನೇ ವಿಕೆಟ್ಗೆ 76 ರನ್ ಸೇರಿಸಿದರು. ಲ್ಯಾಥಮ್ 108 ಎಸೆತಗಳಲ್ಲಿ 10 ಬೌಂಡರಿ ಸಹಿತ ಅಜೇಯ 110 ರನ್ ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಬಾಂಗ್ಲಾದೇಶದ ಪರ ಮುಸ್ತಫಿಜುರ್ ರಹಮಾನ್ 62ಕ್ಕೆ 2, ಮೆಹೆದಿ ಹಸನ್ 42ಕ್ಕೆ 2 ವಿಕೆಟ್ ಪಡೆದರು.