ಕರ್ನಾಟಕ

karnataka

ETV Bharat / sports

ನಾಲ್ಕು ಬಾಲ್​ಗಳಲ್ಲಿ 4 ವಿಕೆಟ್​... ಕಿವೀಸ್​ ವಿರುದ್ಧ ದಾಖಲೆ ಬರೆದ ಯಾರ್ಕರ್​ ಕಿಂಗ್ - ಶ್ರೀಲಂಕಾ vs ನ್ಯೂಜಿಲೆಂಡ್​

ಶ್ರೀಲಂಕಾ ಪಲ್ಲೆಕೆಲೆಯಲ್ಲಿ ನಡೆಯುತ್ತಿರುವ ಟಿ-20 ಕ್ರಿಕೆಟ್​​ ಪಂದ್ಯದಲ್ಲಿ ಲಸಿತ್​ ಮಲಿಂಗಾ ನಾಲ್ಕು ಎಸೆತಗಳಲ್ಲಿ 4 ವಿಕೆಟ್​ ಪಡೆದು ನೂತನ ದಾಖಲೆ ಬರೆದಿದ್ದಾರೆ.

ಮಲಿಂಗಾ

By

Published : Sep 6, 2019, 9:58 PM IST

ಪಲ್ಲೆಕೆಲೆ:ಕಿವೀಸ್​ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಮಾರಕ ಬೌಲಿಂಗ್​ ನಡೆಸಿದ ಶ್ರೀಲಂಕಾ ತಂಡದ ಯಾರ್ಕರ್​ ಕಿಂಗ್​ ಲಸಿತ್​ ಮಲಿಂಗಾ ನಾಲ್ಕು ಎಸೆತಗಳಲ್ಲಿ 4 ವಿಕೆಟ್​ ಪಡೆದು ಮಿಂಚಿದ್ದಾರೆ.

ಲಂಕಾದ ಪಲ್ಲೆಕೆಲೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ನಡೆಸಿತು. ಮಿಚೆಲ್​ ಸ್ಯಾಂಟ್ನರ್​ ಹಾಗೂ ಟಾಡ್​ ಅಸ್ಟ್ಲೆ ಬೌಲಿಂಗ್​ ದಾಳಿಗೆ ಸಿಲುಕಿದ ಲಂಕನ್ನರು 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 125 ರನ್​ಗಳ ಸಾಧಾರಣ ಮೊತ್ತ​ ಪೇರಿಸಿದ್ದಾರೆ. ಲಂಕಾ ಪರ ಡಿ. ಗುಣತಿಲಕಾ 30 ಹಾಗೂ ನಿರೊಶನ್​ ಡಿಕ್ವೆಲ್ಲಾ 24 ರನ್​ ಗಳಿಸಿದರು.

ಇನ್ನು 126 ರನ್​ಗಳ ಗುರಿ ಬೆನ್ನತ್ತಿರುವ ನ್ಯೂಜಿಲೆಂಡ್​ ಮಲಿಂಗಾ ದಾಳಿಗೆ ಸಿಲುಕಿದೆ. ಪಂದ್ಯದ ಮೂರನೇ ಓವರ್​ನಲ್ಲಿ ಬೌಲಿಂಗ್​ಗಿಳಿದ ಮಲಿಂಗಾ ಸತತ ನಾಲ್ಕು ಎಸೆತಗಳಲ್ಲಿ ನಾಲ್ವರನ್ನು ಪೆವಿಲಿಯನ್​ಗೆ ಅಟ್ಟಿದರು. ಓವರ್​ನ ಮೂರನೇ ಎಸೆತದಲ್ಲಿ ಮನ್ರೋ (ಬೌಲ್ಡ್​), ನಾಲ್ಕನೇ ಎಸೆತದಲ್ಲಿ ರುದರ್​ಫೋರ್ಡ್​(ಎಲ್​ಬಿಡಬ್ಲ್ಯೂ), 5ನೇ ಎಸೆತದಲ್ಲಿ ಗ್ರಾಂಡೋಮ್ ​(ಬೌಲ್ಡ್​) ಹಾಗೂ 6ನೇ ಎಸೆತದಲ್ಲಿ ರಾಸ್​ ಟೇಲರ್​ (ಎಲ್​ಬಿಡಬ್ಲ್ಯೂ) ವಿಕೆಟ್​ ಕೀಳುವ ಮೂಲಕ ಇತಿಹಾಸ ನಿರ್ಮಿಸಿದರು.

ಇನ್ನು ಇದಕ್ಕೂ ಮುನ್ನ 2007ರ ವಿಶ್ವಕಪ್​​ನಲ್ಲಿ ಮಲಿಂಗಾ ದಕ್ಷಿಣ ಆಫ್ರಿಕಾ ವಿರುದ್ಧ ಸತತ 4 ಎಸೆತಗಳಲ್ಲಿ 4 ವಿಕೆಟ್​ ಕಬಳಿಸಿದ್ದರು. ಇದೀಗ ಮತ್ತೊಮ್ಮೆ ಈ ಸಾಧನೆಗೈದಿದ್ದಾರೆ. ಅಲ್ಲದೆ ಮಲಿಂಗ ನಿಗದಿತ ಓವರ್​ ಕ್ರಿಕೆಟ್​ನಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಂತಾಗಿದೆ. ಟಿ-20 ಮಾದರಿಯಲ್ಲಿ 2 ಬಾರಿ ಹಾಗೂ ಏಕದಿನ ಕ್ರಿಕೆಟ್​ನಲ್ಲಿ 3 ಸಲ ಹ್ಯಾಟ್ರಿಕ್​ ವಿಕೆಟ್​ ಪಡೆದಿದ್ದಾರೆ.

126 ಗುರಿ ಬೆನ್ನತ್ತಿರುವ ಕಿವೀಸ್​ 8 ಓವರ್​ ಮುಕ್ತಾಯಕ್ಕೆ 5 ವಿಕೆಟ್​ ಕಳೆದುಕೊಂಡು 45 ರನ್​ ಗಳಿಸಿದೆ. ಮೊದಲೆರಡು ಪಂದ್ಯ ಗೆದ್ದಿರುವ ನ್ಯೂಜಿಲೆಂಡ್​ ಈಗಾಗಗಲೇ 3 ಪಂದ್ಯಗಳ ಟಿ-20 ಸರಣಿಯನ್ನು ಕೈವಶಪಡಿಸಿಕೊಂಡಿದೆ.

ABOUT THE AUTHOR

...view details