ಕ್ಯಾಂಡಿ: ಶ್ರೀಲಂಕಾ ತಂಡದ ನಾಯಕ ಲಸಿತ್ ಮಲಿಂಗಾ ನ್ಯೂಜಿಲ್ಯಾಂಡ್ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ ನೂರನೇ ವಿಕೆಟ್ ಪಡೆಯುವ ಮೂಲಕ ಚುಟುಕು ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ನ್ಯೂಜಿಲ್ಯಾಂಡ್ನ ಆರಂಭಿಕ ಬ್ಯಾಟ್ಸ್ಮನ್ ಕಾಲಿನ್ ಮನ್ರೋ ಅವರ ವಿಕೆಟ್ ಪಡೆಯುವ ಮೂಲಕ ಮಲಿಂಗಾ ಅಂತಾರಾಷ್ಟ್ರೀಯ ಟಿ-20ಯಲ್ಲಿ ನೂರನೇ ವಿಕೆಟ್ ಪಡೆದ ದಾಖಲೆ ಬರೆದರು.
ಇದೇ ಸರಣಿಯ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ(97) ವಿಕೆಟ್ ಪಡೆಯುವ ಮೂಲಕ ಟಿ-20 ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಸರದಾರರಾಗಿದ್ದರು. ಇದೀಗ ಕೊನೆಯ ಪಂದ್ಯದಲ್ಲಿ 5 ವಿಕೆಟ್ ಪಡೆಯುವ ಮೂಲಕ ಚುಟುಕು ಕ್ರಿಕೆಟ್ನಲ್ಲಿ 100 ವಿಕೆಟ್ ಗಡಿ ದಾಟಿದ ಶ್ರೇಯಕ್ಕೆ 38 ವರ್ಷದ ಮಲಿಂಗಾ ಪಾತ್ರರಾದರು.
ಇದೇ ಪಂದ್ಯದಲ್ಲಿ ಹ್ಯಾಟ್ರಿಕ್ ಸೇರಿದಂತೆ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ ಮಲಿಂಗಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರಲ್ಲದೆ, ಪಾಕಿಸ್ತಾನದ ವಾಸಿಂ ಅಕ್ರಮ್ ದಾಖಲೆ ಬ್ರೇಕ್ ಮಾಡಿದರು. ಅಕ್ರಮ್ ನಾಲ್ಕು ಹ್ಯಾಟ್ರಿಕ್ ಪಡೆದಿದ್ದರು.