ಕೊಲೊಂಬೊ: ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರಿಗೆ ಕ್ವಾರಂಟೈನ್ ವ್ಯವಸ್ಥೆ ಪೂರೈಸಲು ಸಾಕಷ್ಟು ಸಮಯದ ಅಗತ್ಯ ಇರುವುದರಿಂದ ಶ್ರಿಲಂಕಾ ಕ್ರಿಕೆಟ್ ಮಂಡಳಿ, ಎಲ್ಪಿಎಲ್ ಟೂರ್ನಮೆಂಟ್ ಅನ್ನು ನವೆಂಬರ್ 14 ರಿಂದ ನವೆಂಬರ್ 21ಕ್ಕೆ ಮುಂದೂಡಲು ನಿರ್ಧರಿಸಿದೆ.
ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸುವ ಆಟಗಾರರಿಗೆ ಎಲ್ಪಿಎಲ್ನಲ್ಲೂ ಆಡಲು ಅವಕಾಶ ನೀಡುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.
"ಐಪಿಎಲ್ ನವೆಂಬರ್ 10 ರವರೆಗೆ ನಡೆಯುವುದರಿಂದ, ಐಪಿಎಲ್‌ನಲ್ಲಿ ಭಾಗವಹಿಸಿರುವ ಆಟಗಾರರಿಗೆ ಮತ್ತು ಎಲ್ಪಿಎಲ್ನ ಭಾಗವಾಗಲು ಬಯಸುವ ಆಟಗಾರರಿಗೆ ಟೂರ್ನಿಯಲ್ಲಿ ಭಾಗವಹಿಸಲು ಕೆಲವು ಅವಕಾಶಗಳನ್ನು ನೀಡಲು ನಾವು ಯೋಚಿಸಿದ್ದೇವೆ" ಎಂದು ಎಸ್ಎಲ್ಸಿ ನಿರ್ದೇಶಕ ರವಿನ್ ವಿಕ್ರಮರತ್ನ ಎಸ್ಎಲ್ಸಿ ಬಿಡುಗೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅಕ್ಟೋಬರ್ 1ರಂದು ನಡೆಯಬೇಕಿದ್ದ ಆಟಗಾರರ ಹರಾಜು ಪ್ರಕ್ರಿಯೆಯನ್ನ ಅಕ್ಟೋಬರ್ 9ಕ್ಕೆ ಮುಂದೂಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎಲ್ಪಿಎಲ್ 5 ಫ್ರಾಂಚೈಸಿಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಫ್ರಾಂಚೈಸಿ 6 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ. ಈ ಟೂರ್ನಿ ಆಗಸ್ಟ್ 28ರಂದೇ ಆರಂಭವಾಗಬೇಕಿತ್ತು, ಆದರೆ, ಕೋವಿಡ್ 19 ಬಿಕ್ಕಟ್ಟಿನಿಂದ ಮುಂದೂಡಲ್ಪಟ್ಟಿತ್ತು.