ಕರಾಚಿ:ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರವೂಫ್ ಪಿಎಸ್ಎಲ್ನ 2ನೇ ಎಲಿಮಿನೇಟರ್ ಪಂದ್ಯದಲ್ಲಿ ಶಾಹೀದ್ ಅಫ್ರಿದಿಯನ್ನು ಡಕ್ಔಟ್ ಮಾಡಿದ ನಂತರ ಕ್ಷಮೆ ಕೇಳಿದ ಪ್ರಸಂಗ ನಡೆದಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮುಲ್ತಾನ್ ಸುಲ್ತಾನ್ ಹಾಗೂ ಲಾಹೋರ್ ಕಲಂದರ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಲಾಹೋರ್ 183 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ ಮುಲ್ತಾನ್ ಸುಲ್ತಾನ್ 25 ರನ್ಗಳ ಸೋಲು ಕಂಡಿತ್ತು. ಆದರೆ 14ನೇ ಓವರ್ನಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ಅಫ್ರಿದಿಯನ್ನು ರವೂಫ್ ಬೌಲ್ಡ್ ಮಾಡಿ ಕ್ಷಮೆ ಕೋರಿದರು.
14ನೇ ಓವರ್ನ 5ನೇ ಎಸೆತದಲ್ಲಿ ಸೂಪರ್ ಇನ್ಸ್ವಿಂಗ್ ಯಾರ್ಕರ್ ಮೂಲಕ ಅಫ್ರಿದಿಯನ್ನ ಕ್ಲೀನ್ ಬೌಲ್ಡ್ ಮಾಡಿದ ರವೂಫ್, "ಲಾಲ , ಐ ಯಾಮ್ ಸಾರಿ" ಎಂದಿದ್ದಾರೆ. ಈ ವಿಡಿಯೋವನ್ನು ಪಿಎಸ್ಎಲ್ ಅಧಿಕೃತ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ. ಅಫ್ರಿದಿ ಒಬ್ಬ ಹಿರಿಯ ಆಟಗಾರನಾಗಿರುವುದರಿಂದ ಅವರನ್ನು ಗೌರವಿಸಿದೆ ಎಂದು ರವೂಫ್ ಪಂದ್ಯದ ಬಳಿಕ ಹೇಳಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ರವೂಫ್ 30 ರನ್ ನೀಡಿ 3 ವಿಕೆಟ್ ಪಡೆದು ಲಾಹೋರ್ಗೆ 25 ರನ್ಗಳ ಗೆಲುವು ತಂದುಕೊಟ್ಟಿದ್ದರು. ಲಾಹೋರ್ ಪಿಎಸ್ಎಲ್ನಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಮಂಗಳವಾರ ಕರಾಚಿ ಕಿಂಗ್ಸ್ ವಿರುದ್ಧ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ.