ಮುಂಬೈ:ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್ ಮಹಾಟೂರ್ನಿಯಲ್ಲಿ ಎಂ.ಎಸ್.ಧೋನಿಗೆ ಅವಕಾಶ ನೀಡಿಲ್ಲವೆಂದರೆ ಈ ವಿಕೆಟ್ ಕೀಪರ್ಗೆ ಮೊದಲ ಅವಕಾಶ ನೀಡಬೇಕು ಎಂದು ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿವೊಂದರಲ್ಲಿ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ, ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಧೋನಿ ಇಲ್ಲದಿದ್ದರೆ ವಿಕೆಟ್ ಕೀಪರ್ ಆಗಿ ಯುವ ಉದಯೋನ್ಮುಖ ಆಟಗಾರನಿಗೆ ಅವಕಾಶ ನೀಡಬೇಕು ಎಂದಿದ್ದಾರೆ.
2019ರ ಏಕದಿನ ವಿಶ್ವಕಪ್ ಮುಕ್ತಾಯಗೊಂಡಾಗಿನಿಂದಲೂ ಎಂ.ಎಸ್.ಧೋನಿ ಯಾವುದೇ ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗಿಲ್ಲ. ಅವರ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ಗೆ ಚಾನ್ಸ್ ನೀಡಲಾಗಿದ್ದು, ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಏನು ಮೂಡಿ ಬಂದಿಲ್ಲ. ಮೀಸಲು ವಿಕೆಟ್ ಕೀಪರ್ ಆಗಿ ಕೆಲವೊಂದು ಪಂದ್ಯಗಳಿಗೆ ಸಂಜು ಸ್ಯಾಮ್ಸನ್ ಆಯ್ಕೆಗೊಂಡಿದ್ದರೂ ಆಡುವ 11ರ ಬಳಗದಲ್ಲಿ ಚಾನ್ಸ್ ಪಡೆದುಕೊಂಡಿಲ್ಲ. ಹೀಗಾಗಿ ಇದೀಗ ಅವರಿಗೆ ಅವಕಾಶ ನೀಡಬೇಕು ಎಂದಿದ್ದಾರೆ.
ಇನ್ನು ವಿಶ್ವಕಪ್ ಮಹಾಟೂರ್ನಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಐಪಿಎಲ್ ನಡೆಯಲಿದ್ದು, ಅದರಲ್ಲಿ ಧೋನಿ ಅದ್ಭುತ ಪ್ರದರ್ಶನ ನೀಡಿದ್ರೆ ತಂಡಕ್ಕೆ ಅವರ ಆಯ್ಕೆ ಕನ್ಫರ್ಮ್ ಆಗಲಿದೆ.
ಇದರ ಜತೆಗೆ ಅನಿಲ್ ಕುಂಬ್ಳೆ ವಿಕೆಟ್ ಕೀಪರ್ ಆಗಿ ಈಶನ್ ಕಿಶನ್ ಹಾಗೂ ಕೆ.ಎಲ್.ರಾಹುಲ್ ಬಗ್ಗೆ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಹಾಗೂ ಕರ್ನಾಟಕದ ದೇಶಿ ಕ್ರಿಕೆಟ್ ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದಾರೆ.