ಕೊಲಂಬೊ :ವಿಶ್ವಕಪ್ 2011ರ ಫೈನಲ್ ಪಂದ್ಯ ಪಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾ ತಂಡ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರನ್ನು ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ವಿಶ್ವಕಪ್ 2011ರ ಫೈನಲ್ ಪಂದ್ಯದ ಬಳಿಕ ಶ್ರೀಲಂಕಾ ಕ್ರೀಡಾ ಸಚಿವಾಲಯ ಈ ಫಿಕ್ಸಿಂಗ್ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಏಪ್ರಿಲ್ 2, 2011 ರ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಶ್ರೀಲಂಕಾದ ಅಂದಿನ ಕ್ರೀಡಾ ಸಚಿವ ಮಹಿಂದಾನಂದ ಅಲುತ್‌ಗಮಗೆ, ಪಂದ್ಯ ಫಿಕ್ಸಿಂಗ್ ಮಾಡಲಾಗಿತ್ತು ಎಂಬ ಗಂಭೀರ ಆರೋಪ ಮಾಡಿದ್ದರು. ಆದರೆ, ಅದಕ್ಕೆ ಸಂಬಂಧಪಟ್ಟ ಯಾವುದೇ ಪುರಾವೆ ಅವರು ಒದಗಿಸಿರಲಿಲ್ಲ.
ಸಂಗಕ್ಕರ ಅವರನ್ನು ವಿಚಾರಣೆ ನಡೆಸುತ್ತಿದ್ದಂತೆ, ಹಿರಿಯ ಕ್ರಿಕೆಟಿಗನಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಶ್ರೀಲಂಕಾ ಕ್ರಿಕೆಟ್ ಕೌನ್ಸಿಲ್ ಕಚೇರಿ (ಎಸ್ಎಲ್ಸಿ) ಮುಂದೆ ಸಮಗಿ ತರುಣ ಬಾಲವೇಗಯಾ ಸಂಘಟನೆ ಸದಸ್ಯರು ಪೋಸ್ಟರ್ ಪ್ರದರ್ಶಿಸಿ ಪ್ರತಿಭಟನೆ ಮಾಡಿದರು.
ಮೂಲಗಳ ಪ್ರಕಾರ, ಸಂಗಕ್ಕಾರಅವರು ಮುಂದಿನ ವಾರ ತಮ್ಮ ಹೇಳಿಕೆ ದಾಖಲಿಸಬೇಕಿತ್ತು. ಆದರೆ, ಶೀಘ್ರವಾಗಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರಿಂದ ಗುರುವಾರ ವಿಚಾರಣೆಗೆ ಹಾಜರಾಗಿದ್ದಾರೆ. ಈಗಾಗಲೇ 2011 ರ ರಾಷ್ಟ್ರೀಯ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಅರವಿಂದ ಡಿ ಸಿಲ್ವಾ ಮತ್ತು ಆರಂಭಿಕ ಆಟಗಾರ ಉಪುಲ್ ತರಂಗ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಇಲ್ಲಿಯವರಿಗೆ ಸಸ್ಪೆಂಡ್ ಮಾಡಿದ ಆಟಗಾರರು ಯಾರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.