ರಾಜ್ಕೋಟ್(ಗುಜರಾತ್):ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಪ್ರಮುಖ 2 ವಿಕೆಟ್ ಕಬಳಿಸಿ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾವನ್ನ ಪಾರು ಮಾಡಿರುವ ಚೈನಾಮ್ಯಾನ್ ಖ್ಯಾತಿಯ ಕುಲ್ದೀಪ್ ಯಾದವ್ 17 ವರ್ಷದ ಹಿಂದಿನ ದಾಖಲೆ ಬ್ರೇಕ್ ಮಾಡಿದ್ದಾರೆ.
ಇಲ್ಲಿಯವರೆಗೆ 58 ಏಕದಿನ ಪಂದ್ಯಗಳನ್ನ ಆಡಿರುವ ಕುಲ್ದೀಪ್ ಯಾದವ್ 101 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಏಕದಿನ ಪಂದ್ಯಗಳಲ್ಲಿ ವೇಗವಾಗಿ 100 ವಿಕೆಟ್ ಕಬಳಿಸಿದ ಭಾರತದ ಮೊದಲ ಸ್ಪಿನ್ನರ್ ಎಂಬ ದಾಖಲೆ ಬರೆದಿದ್ದಾರೆ. ಈ ಹಿಂದೆ 2003ರಲ್ಲಿ ಹರ್ಭಜನ್ ಸಿಂಗ್ 76 ಪಂದ್ಯಗಳಿಂದ 100 ವಿಕೆಟ್ ಪಡೆದಿದ್ದರು.
ಶುಕ್ರವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಅಲೆಕ್ಸ್ ಕ್ಯಾರಿ ವಿಕೆಟ್ ಪಡೆಯುವ ಮೂಲಕ 100 ವಿಕೆಟ್ಗಳ ಕ್ಲಬ್ ಸೇರಿದ್ರು. ಅದೇ ಓವರ್ನಲ್ಲಿ 98 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸ್ಟೀವ್ ಸ್ಮಿತ್ ವಿಕೆಟ್ ಕಬಳಿಸಿ ಟೀಂ ಇಂಡಿಯಾದ ಗೆಲುವಿನ ಹಾದಿ ಸುಗಮಗೊಳಿಸಿದ್ರು.
ವೇಗವಾಗಿ ನೂರು ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಪೈಕಿ ಕುಲ್ದೀಪ್ 3ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ 56 ಪಂದ್ಯಗಳಿಂದ ಮೊಹಮ್ಮದ್ ಶಮಿ ಮತ್ತು 2ನೇ ಸ್ಥಾನದಲ್ಲಿರುವ ಬೂಮ್ರಾ 57 ಪಂದ್ಯಗಳಿಂದ ನೂರು ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಪ್ಘನ್ ಬೌಲರ್ ರಶೀದ್ ಖಾನ್ 44 ಏಕದಿನ ಪಂದ್ಯಗಳಿಂದ ನೂರು ವಿಕೆಟ್ ಕಬಳಿಸಿ ಮೊದಲ ಸ್ಥಾನದಲ್ಲಿದ್ದಾರೆ.