ರಾಜ್ಕೋಟ್(ಗುಜರಾತ್): ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ರಿಷಭ್ ಪಂತ್ ಗಾಯಗೊಂಡು ದ್ವಿತೀಯ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಬದಲಿ ವಿಕೆಟ್ ಕೀಪರ್ ಆಗಿ ಆಂಧ್ರ ಪ್ರದೇಶದ ಕೆ.ಎಸ್.ಭರತ್ಗೆ ಅವಕಾಶ ನೀಡಲಾಗಿದೆ.
ದೇಶೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಂಧ್ರ ಪ್ರದೇಶ ಮೂಲದ ಭರತ್ಗೆ ಬಿಸಿಸಿಐ ಬುಲಾವ್ ನೀಡಿದೆ. ಕಳೆದ ಪಂದ್ಯದಲ್ಲಿ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದ ಕೆ.ಎಲ್.ರಾಹುಲ್ ಇಂದಿನ ಪಂದ್ಯದಲ್ಲೂ ಕೀಪಿಂಗ್ ಮಾಡಲಿದ್ದಾರೆ.
ಇತ್ತ ಯುವ ಆಟಗಾರರಾದ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ರನ್ನ ಬಿಟ್ಟು ಕೆ.ಎಸ್.ಭರತ್ಗೆ ಅವಕಾಶ ನೀಡಿದ್ದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಇಬ್ಬರೂ ನ್ಯೂಜಿಲ್ಯಾಂಡ್ ವಿರುದ್ಧ ಪ್ರವಾಸ ಕೈಗೊಂಡಿರುವ ಭಾರತ ಎ ತಂಡದಲ್ಲಿರುವುದರಿಂದ ಕೆ.ಎಸ್.ಭರತ್ಗೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
74 ಪ್ರಥಮ ದರ್ಜೆ ಪಂದ್ಯಗಳಿಂದ ಭಾರತ್ 37.66 ಸರಾಸರಿಯಲ್ಲಿ 4,143 ರನ್ ಗಳಿಸಿದ್ದಾರೆ. 26 ವರ್ಷದ ಆಟಗಾರನಿಗೆ 11ರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ ಇದ್ದರೂ, ಭಾರತ ತಂಡಕ್ಕೆ ಭರತ್ ಅತ್ಯುತ್ತಮ ಬ್ಯಾಕ್ ಅಪ್ ಆಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.