ಬೆಂಗಳೂರು:8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯ ಮಳೆಗೆ ಆಹುತಿಯಾಗಿದೆ. ಪಂದ್ಯ ರದ್ದಾದರೂ ಕೂಡ ಮೈಸೂರು ವಾರಿಯರ್ಸ್ ತಂಡದ ಬೌಲರ್ ಜಗದೀಶ ಸುಚಿತ್ ದಾಖಲೆಯೊಂದನ್ನು ಬರೆದರು.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಟಾಸ್ ಗೆದ್ದ ಮೈಸೂರು ವಾರಿಯರ್ಸ್ ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ಗಿಳಿದ ಬೆಂಗಳೂರು ಬ್ಲಾಸ್ಟರ್ಸ್ ನಿಧಾನಗತಿಯ ಆರಂಭ ಪಡೆಯಿತು. ಅಲ್ಲದೆ ಜಗದೀಶ ಸುಚಿತ್ ಮಾರಕ ಬೌಲಿಂಗ್ (3-0-13-3) ದಾಳಿಗೆ ಸಿಲುಕಿ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು.
ಪಂದ್ಯದ 13ನೇ ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದ್ದ ವೇಳೆ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಅಡ್ಡಿಯುಂಟಾಯಿತು. ಬಳಿಕವೂ ವರುಣನ ಅಬ್ಬರ ಜೋರಾದ ಕಾರಣ ಅಂಪೈರ್ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಬ್ಲಾಸ್ಟರ್ಸ್ ಪರ ಶರತ್ ಬಿ.ಆರ್. 13, ರೋಹನ್ ಕದಮ್ 23, ನಿಕಿನ್ ಜೋಶ್ ಅಜೇಯ 28, ನಾಯಕ ರೋಗ್ಸನ್ ಜೊನಾಥನ್ 17 ಹಾಗೂ ಕೆನ್ ಭರತ್ ಅಜೇಯ 5 ರನ್ ಗಳಿಸಿದರು.