ಹೈದರಾಬಾದ್: ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವರ ನಿರ್ಧಾರ ಹರಾಜಿನ ಕಾರ್ಯತಂತ್ರದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್ ಮೈಕ್ ಹೆಸನ್ ಒಪ್ಪಿಕೊಂಡಿದ್ದಾರೆ.
ಆರ್ಸಿಬಿ ಹರಾಜಿಗೂ ಮುನ್ನವೇ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು ಎಂದು ಅವರು ಬಹಿರಂಗಗೊಳಿಸಿದ್ದಾರೆ. ಕೊಹ್ಲಿ ಆರಂಭಿಕನಾಗಿ ಆಡುವ ಬಗ್ಗೆ ಮೊದಲೇ ಮಾತನಾಡಿದ್ದೆವು. ಏಕೆಂದರೆ, ನಮಗೆ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಹೇಗೆ ರಚಿಸಬೇಕೆಂಬ ದೃಷ್ಟಿಯಿಂದ ಹರಾಜು ಯೋಜನೆಯನ್ನು ಸಿದ್ಧಪಡಿಸಿಕೊಂಡಿದ್ದೆವು ಎಂದು ಮೈಕ್ ಹೆಸನ್ ತಿಳಿಸಿದ್ದಾರೆ.
"ನಾವು ಐಪಿಎಲ್ ಹರಾಜಿಗೂ ಮೊದಲು ಕೊಹ್ಲಿ ಆರಂಭಿಕನಾಗಿ ಆಡುವ ಬಗ್ಗೆ ಮಾತನಾಡಿದ್ದೆವು. ಈ ಮೂಲಕ ನಮ್ಮ ಬ್ಯಾಟಿಂಗ್ ಶ್ರೇಣಿಯನ್ನು ರಚಿಸಿಕೊಳ್ಳಬೇಕು ಎಂದು ಯೋಜಿಸಿದ್ದೆವು. ಆದ್ದರಿಂದ ಖಂಡಿತವಾಗಿಯೂ, ಕೊಹ್ಲಿಯ ನಿರ್ಧಾರ ನಮಗೆ ಆಶ್ಚರ್ಯ ತಂದಿಲ್ಲ. ತಂಡದ ಸಂಯೋಜನೆ ನೋಡಲು ಸ್ವಲ್ಪ ವಿಭಿನ್ನವಾಗಿ ಕಾಣಬಹುದು. ಆದರೆ ಇದು ನಮ್ಮ ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು ಬಹಳ ನೆರವು ನೀಡಿತು" ಎಂದು ಆರ್ಸಿಬಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.