ಮುಂಬೈ:ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳಲ್ಲಿ ವಿಫಲರಾಗಿರುವ ಅನುಭವಿ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ ಸ್ಪಿನ್ ವಿರುದ್ಧ ರನ್ಗಳಿಸಲು ಪರದಾಡುತ್ತಿದ್ದಾರೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ನಾಯಕ ಕೊಹ್ಲಿ, ಪೂಜಾರ ಟೀಮ್ ಇಂಡಿಯಾದ ಅತ್ಯುತ್ತಮ ಬ್ಯಾಟ್ಸ್ಮನ್, ಅವರನ್ನು ಟೀಕಿಸುವುದು ಸರಿಯಲ್ಲ ಎಂದರು.
ಪೂಜಾರ ಇಂಗ್ಲೆಂಡ್ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3 ಪಂದ್ಯಗಳಿಂದ ಕೇವಲ 116 ರನ್ಗಳಿಸಿದ್ದಾರೆ. ಅವರ ಸರಾಸರಿ ಕೇವಲ 23.6. ಅದರಲ್ಲೂ ಇಂಗ್ಲೆಂಡ್ನ ಎಡಗೈ ಸ್ಪಿನ್ನರ್ ಜಾಕ್ ಲೀಚ್ ವಿರುದ್ಧ 5 ಇನ್ನಿಂಗ್ಸ್ಗಳಲ್ಲಿ 3 ಬಾರಿ ಔಟಾಗಿದ್ದಾರೆ.
ನೀವು ಈಗ ತವರಿನಲ್ಲಿ ಪೂಜಾರ ಆಟವನ್ನು ಟೀಕಿಸಲು ಪ್ರಾರಂಭಿಸಿದರೆ, ಅದು ಅವರ ವಿಚಾರವಾಗಿ ನ್ಯಾಯಯುತವಾಗಿದೆ ಎಂದು ನಾನು ಭಾವಿಸುವುದಿಲ್ಲ. ಅವರು ದೀರ್ಘಕಾಲದಿಂದಲೂ ವಿಶ್ವ ದರ್ಜೆಯ ಬ್ಯಾಟ್ಸ್ಮನ್ ಆಗಿ ಪ್ರದರ್ಶನ ತೋರುತ್ತಿದ್ದಾರೆ. ಇದನ್ನು ನಾನು ಮತ್ತೆ ಮತ್ತೆ ಹೇಳುತ್ತಲೇ ಇರುತ್ತೇನೆ. ಜಿಂಕ್ಸ್(ರಹಾನೆ)ಜೊತೆಗೆ ಪೂಜಾರ ನಮ್ಮ ತಂಡದ ಪ್ರಮುಖ ಟೆಸ್ಟ್ ಆಟಗಾರ. ಅವರು ಹಾಗೆಯೇ ಮುಂದುವರಿಯುತ್ತಾರೆ" ಎಂದು ಕೊಹ್ಲಿ ಸಮರ್ಥಿಸಿಕೊಂಡರು.
ಪೂಜಾರ ವೃತ್ತಿ ಜೀವನದ ಆರಂಭದಲ್ಲಿ ತವರಿನಲ್ಲಿ ರನ್ಗಳಿಸುತ್ತಿದ್ದರೂ, ವಿದೇಶದಲ್ಲಿ ವಿಫಲವಾಗುತ್ತಿದ್ದರು. ಆ ಸಂದರ್ಭದಲ್ಲಿ ಜನರು ಅವರನ್ನು ತವರಿನ ಹುಲಿ ಎಂದು ಕರೆಯುತ್ತಿದ್ದರು. ಆದರೆ ಸಾಕಷ್ಟು ಶ್ರಮವಹಿಸಿ ತಮ್ಮ ಆಟದಲ್ಲಿ ಬದಲಾವಣೆ ಮಾಡಿಕೊಂಡಿರುವ ಪೂಜಾರ, ಇದೀಗ ಏಷ್ಯಾದ ಹೊರಗೆ ಯಾವುದೇ ದೇಶದಲ್ಲಾದರೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದು, ಸಾಕಷ್ಟು ರನ್ಗಳಿಸುತ್ತಿದ್ದಾರೆ ಎಂದು ನೆನಪಿಸಿದ್ದಾರೆ.
ಇದನ್ನೂ ಓದಿ: ಸರಣಿ ಡ್ರಾ ಮಾಡಿಕೊಂಡರೆ ಅದು ನನ್ನ ಕ್ರಿಕೆಟ್ ಜೀವನದ ಅತ್ಯುತ್ತಮ ಸಾಧನೆ: ರೂಟ್