ದುಬೈ: ಪಾಕಿಸ್ತಾನ ಮತ್ತು ಜಿಂಬಾಬ್ವೆ ಏಕದಿನ ಸರಣಿ ಅಂತ್ಯವಾಗುತ್ತಿದ್ದಂತೆ ಐಸಿಸಿ ನೂತನ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತದ ಸ್ಟಾರ್ ಬ್ಯಾಟ್ಸ್ಮನ್ಗಳಾದ ವಿರಾಟ್ ಮತ್ತು ರೋಹಿತ್ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸರಣಿಯಲ್ಲಿ ಒಂದು ಶತಕದ ಸಹಿತ 221 ರನ್ಗಳಿಸಿದ ಬಾಬರ್ ಅಜಮ್ 8 ರೇಟಿಂಗ್ ಅಂಕಗಳನ್ನು ಪಡೆದಿದ್ದು, 3ನೇ ಸ್ಥಾನದಲ್ಲೇ ಇದ್ದಾರೆ. ಆದರೆ, ಭಾರತೀಯ ಬ್ಯಾಟ್ಸ್ಮನ್ಗಳ ನಡುವಿನ ಅಂತರವನ್ನು ಕೊಂಚ ತಗ್ಗಿಸಿಕೊಂಡಿದ್ದಾರೆ. ಈ ಸರಣಿಗೂ ಮುನ್ನ ಬಾಬರ್ 829 ಅಂಕ ಹೊಂದಿದ್ದರು.
ಆದರೆ,ಜಿಂಬಾಬ್ವೆ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಬ್ರೆಂಡನ್ ಟೇಲರ್ 51ರಿಂದ 42ಕ್ಕೆ ಹಾಗೂ ಸೀನ್ ವಿಲಿಯಮ್ಸ್ 58ರಿಂದ 46ನೇ ಸ್ಥಾನಕ್ಕೆ ಜಿಗಿದ್ದಾರೆ.
ವಿರಾಟ್ ಕೊಹ್ಲಿ(871)ರೋಹಿತ್ ಶರ್ಮಾ (855)ಮೊದಲೆರಡು ಸ್ಥಾನಗಳಲ್ಲಿ ಮುಂದುವರೆದಿದ್ದಾರೆ. ಬಾಬರ್ ಅಜಮ್( 837) ನಂತರದ ಸ್ಥಾನದಲ್ಲಿ ರಾಸ್ ಟೇಲರ್(818) ಹಾಗೂ ಫಾಫ್ ಡು ಪ್ಲೆಸಿಸ್(790)ಇದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಕಿವೀಸ್ ಬೌಲರ್ ಟ್ರೆಂಟ್ ಬೌಲ್ಟ್(722) ಮೊದಲ ಸ್ಥಾನದಲ್ಲಿ, ಭಾರತದ ಜಸ್ಪ್ರೀತ್ ಬುಮ್ರಾ (719) 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. 701 ಅಂಕಗಳೊಂದಿಗೆ ಅಫ್ಘಾನಿಸ್ತಾನದ ಮುಜಿಬ್ ಉರ್ ರೆಹಮಾನ್ 3ನೇ ಸ್ಥಾನದಲ್ಲಿದ್ದಾರೆ.
ಆಲ್ರೌಂಡರ್ ಶ್ರೇಯಾಂಕದಲ್ಲಿ ಶಕಿಬ್ ಅಲ್ ಹಸನ್ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಫ್ಘಾನಿಸ್ತಾನ ಮೊಹಮ್ಮದ್ ನಬಿ 2 ಹಾಗೂ ಇಂಗ್ಲೆಂಡ್ ತಂಡದ ಕ್ರಿಸ್ ವೋಕ್ಸ್ 3ನೇ ಸ್ಥಾನದಲ್ಲಿದ್ದರೆ, ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಜಿಂಬಾಬ್ವೆಯ ಸೀನ್ ವಿಲಿಯಮ್ಸ್ ಟಾಪ್ 10 ಕ್ಕೆ ಪ್ರವೇಶಿಸಿದ್ದಾರೆ.