ದುಬೈ :ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಮೆಚ್ಚಿ ಮಾತನಾಡಿರುವ ಸ್ಫೋಟಕ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್, ತಂಡವನ್ನು ಮುಂದೆ ನಿಂತು ನಡೆಸುವುದರಲ್ಲಿ ಕೊಹ್ಲಿ ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್19ರಿಂದ ನವೆಂಬರ್ 10ರವರೆಗೆ ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ ನಡೆಯಲಿದೆ. ಈ ಬಾರಿ ಹಿಂದಿನ ತಂಡದ ಜೊತೆಗೆ ಆ್ಯರೋನ್ ಫಿಂಚ್, ಕ್ರಿಸ್ ಮೊರೀಸ್ ಹಾಗೂ ಆ್ಯಡಂ ಜಂಪಾ ಕೂಡ ಆರ್ಸಿಬಿ ತಂಡ ಸೇರಿರುವುದು ಜನಮೆಚ್ಚಿದ ತಂಡದ ಬಲ ಹೆಚ್ಚಿಸಿದೆ.
"ನನ್ನ ಪ್ರಕಾರ ಐಪಿಎಲ್ ನಡೆಯುವ ಬಗ್ಗೆ ಒಂದು ತಿಂಗಳ ಹಿಂದೆಯೇ ಸ್ಪಷ್ಟತೆ ಬಂದಿದೆ. ಐಪಿಎಲ್ ಆಯೋಜನೆಯಲ್ಲಿ ಬಿಸಿಸಿಐ ಗಮನಾರ್ಹ ಕೆಲಸ ಮಾಡಿದೆ. ನಾವು ಕೂಡ ಟೂರ್ನಿಯಲ್ಲಿ ಆಡಲು ತುಂಬಾ ಉತ್ಸುಕರಾಗಿದ್ದೇವೆ. ನಾನು ಹಿಂದಿಗಿಂತಲೂ ಬಹಳ ಉತ್ಸುಕನಾಗಿದ್ದೇನೆ ಮತ್ತು ಆರ್ಸಿಬಿ ಹುಡುಗರೊಂದಿಗೆ ಹೊರಗಡೆ ಇರಲು ಬಯಸುತ್ತೇನೆ" ಎಂದು ಆರ್ಸಿಬಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.
"ನಾವು ತುಂಬಾ ಕಠಿಣ ಪರಿಶ್ರಮ ಪಡುವ ಸಾಮರ್ಥ್ಯ ಹೊಂದಿದ್ದೇವೆ. ಜೊತೆಗೆ ಒಳ್ಳೆಯ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಎಲ್ಲರನ್ನು ಕಠಿಣ ಪರಿಶ್ರಮದ ವಾತಾವರಣಕ್ಕೆ ಕೊಂಡೊಯ್ಯಲಾಗಿದೆ ಎಂದು ನಾನು ಭಾವಿಸುತ್ತೇನೆ. ಇದೆಲ್ಲದರ ಶ್ರೇಯ ವಿರಾಟ್ಗೆ ಸಲ್ಲಬೇಕು. ಅವರು ಪ್ರತಿ ಹಂತದಲ್ಲಿ ಉತ್ತಮ ಉದಾಹರಣೆಗಳನ್ನು ನೀಡುವ ಮೂಲಕ, ತಂಡವನ್ನು ಮುಂದೆ ನಿಂತು ನಡೆಸುತ್ತಾರೆ. ನಿಮಗೆ ಅಂತಹ ಮುನ್ನಡೆಸುವ ನಾಯಕನಿದ್ದರೆ ಅವರನ್ನು ಹಿಂಬಾಲಿಸುವುದು ತುಂಬಾ ಸುಲಭ" ಎಂದು ಕೊಹ್ಲಿಯ ನಾಯಕತ್ವ ಮೆಚ್ಚಿದ್ದಾರೆ ಎಬಿಡಿ.
ದೀರ್ಘ ವಿರಾಮದ ಬಳಿಕ ಮರಳಿರುವುದರ ಬಗ್ಗೆ ಮಾತನಾಡಿರುವ ಅವರು,"ವಿರಾಮಗಳನ್ನು ಪಡೆಯುವುದು ಸಹಜ, ಒಮ್ಮೆ ವೇಳಾಪಟ್ಟಿಗಳಿಲ್ಲದೆ ಕ್ರಿಕೆಟ್ನಿಂದ ಒಂದೆರಡು ತಿಂಗಳು ಇರಬೇಕಾಗುತ್ತದೆ. ಒಮ್ಮೆ ಕೆಲವು ಗಾಯಗಳಿಂದ 7 ಅಥವಾ 8 ತಿಂಗಳು ಕ್ರಿಕೆಟ್ನಿಂದ ದೂರವಿರಬೇಕಾಗುತ್ತದೆ. ದೊಡ್ಡ ವಿರಾಮದ ನಂತರ ಬಂದಾಗ ಆಗುವ ಅನುಭವ ನನಗಿದೆ. ನೀವು ಮತ್ತೆ ಹಿಂತಿರುಗಿ ಕ್ರಿಕೆಟ್ನೊಟ್ಟಿಗೆ ಹೇಗೆ ಹೋಗುತ್ತೀರಿ ಎಂಬುದು ಆಶ್ಚರ್ಯಕರವಾಗಿರುತ್ತದೆ " ಎಂದು ಅವರು ತಿಳಿಸಿದ್ದಾರೆ.
ಹಿಂದಿನ ಆವೃತ್ತಿಗಳಲ್ಲಿ ತಂಡದಲ್ಲಿದ್ದಕ್ಕಿಂತ ಈ ಬಾರಿ ಹೆಚ್ಚು ಆಯ್ಕೆಗಳು ತಂಡದಲ್ಲಿವೆ. ವಿರಾಟ್ ಮತ್ತು ಕೋಚ್ಗಳು ಅತ್ಯುತ್ತಮ ತಂಡ ಹುಡುಕಲಿದ್ದಾರೆ ಎಂದು ಮಿಸ್ಟರ್ 360 ಖ್ಯಾತಿಯ ವಿಲಿಯರ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.