ಅಹ್ಮದಾಬಾದ್ :ನಾಯಕ ಕೊಹ್ಲಿ ಮತ್ತು ಯುವ ಆರಂಭಿಕ ಬ್ಯಾಟ್ಸ್ಮನ್ ಇಶಾನ್ ಕಿಶನ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ಜಯಭೇರಿ ಬಾರಿಸುವ ಮೂಲಕ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ನೀಡಿದ್ದ 165 ರನ್ಗಳ ಗುರಿಯನ್ನು ಟೀಂ ಇಂಡಿಯಾ 17.5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು. ಆರಂಭಿಕನಾಗಿ ಕಣಕ್ಕಿಳಿದಿದ್ದ ರಾಹುಲ್ 6 ಎಸೆತಗಳಲ್ಲಿ ಖಾತೆ ತೆರೆಯದೇ ಪೆವಿಲಿಯನ್ ಸೇರಿದರು. ಆದರೆ, ಯುವ ಬ್ಯಾಟ್ಸ್ಮನ್ ಇಶಾನ್ ಕಿಶನ್ ಜೊತೆ ಸೇರಿದ ವಿರಾಟ್ ಕೊಹ್ಲಿ 2ನೇ ವಿಕೆಟ್ಗೆ 94 ರನ್ಗಳ ಜೊತೆಯಾಟ ನೀಡಿ ಆರಂಭಿಕ ಆಘಾತದಿಂದ ಪಾರುಮಾಡಿದ್ದಲ್ಲದೆ ತಂಡವನ್ನು ಸುಸ್ಥಿತಿಗೆ ತಂದರು.
ಪದಾರ್ಪಣೆ ಪಂದ್ಯದಲ್ಲಿ ಅಬ್ಬರಿಸಿದ ಕಿಶನ್ ಕೇವಲ 32 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 56 ರನ್ಗಳಿಸಿ ಔಟಾದರು. ನಂತರ ಬಂದ ಪಂತ್ ಕೂಡ ಅಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 13 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಹಿತ 26 ರನ್ಗಳಿಸಿದ್ದಲ್ಲದೆ, ಕೊಹ್ಲಿ ಜೊತೆ 36 ರನ್ಗಳ ಜೊತೆಯಾಟ ನೀಡಿ ಜೋರ್ಡನ್ಗೆ ವಿಕೆಟ್ ಒಪ್ಪಿಸಿದರು.