ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೂಲತಃ ದೆಹಲಿಯವರಾದರು ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಮಂಗಳವಾರ ಆಶ್ಚರ್ಯಕರವಾಗಿ ಕೊಹ್ಲಿ ಮನೆಗೆ ಭೇಟಿ ಕೊಟ್ಟಿರುವ ಶ್ರೇಯಸ್ ಅಯ್ಯರ್ ಕೊಹ್ಲಿಗೆ ಮಲೆನಾಡಿನ ಪ್ರಸಿದ್ಧ ಖಾದ್ಯವಾದ ನೀರ್ದೋಸೆ ತಿನ್ನಿಸಿದ್ದಾರೆ.
ಬುಧವಾರ ಶ್ರೇಯಸ್ ಅಯ್ಯರ್ ಅವರ ಅಮ್ಮ ರೋಹಿಣಿ ಅಯ್ಯರ್ ಮಾಡಿಕೊಟ್ಟ ನೀರ್ದೋಸೆಯೊಂದಿಗೆ ಕೊಹ್ಲಿ ಮನೆಗೆ ದಿಢೀರ್ ಭೇಟಿ ಕೊಟ್ಟಿದ್ದಾರೆ. ನಂತರ ಅವರು ಮಶ್ರೂಮ್ ಬಿರಿಯಾನಿಯನ್ನು ಶ್ರೇಯಸ್ ಅಯ್ಯರ್ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಶ್ರೇಯಸ್ ಅಯ್ಯರ್ ತಂದೆ ಸಂತೋಷ್ ಅಯ್ಯರ್ ಮೂಲತಃ ಕೇರಳದವರು. ಅವರ ತಾಯಿ ಮಂಗಳೂರಿನವರಾಗಿರುವುದರಿಂದ ಅಲ್ಲಿ ಪ್ರಸಿದ್ಧವಾಗಿರುವ ನೀರ್ದೋಸೆಯನ್ನು ಮಾಡಿ ಭಾರತೀಯ ಕಪ್ತಾನನಿಗೆ ಕಳುಹಿಸಿಕೊಟ್ಟಿದ್ದಾರೆ.
ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ಶ್ರೇಯಸ್ರೊಂದಗಿನ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ವಿರಾಟ್, ಕೋವಿಡ್-19 ಭೀತಿಯಿಂದ ಸಾಮಾಜಿಕ ಅಂತರ ಹಾಗೂ ಫೇಸ್ ಮಾಸ್ಕ್ ತೊಟ್ಟಿದ್ದಾರೆ.
ಇನ್ನು ಆ ಪೋಸ್ಟ್ನಲ್ಲಿ "ನಮ್ಮಿಂದ 500 ಮೀಟರ್ ದೂರದಲ್ಲಿ ವಾಸಿಸುವ ಕರುಣಾಳು ನಮಗೆ ಉತ್ತಮವಾದ ನೀರ್ದೋಸೆಗಳನ್ನು ತಂದು ನಮ್ಮಲ್ಲಿ ನಗು ತರಿಸಿದ್ದಾರೆ. ಇದನ್ನು ಮಾಡಿಕೊಟ್ಟ ನಿಮ್ಮ ತಾಯಿಗೆ ಧನ್ಯವಾದಗಳು. ನಾವು ಮಾಡಿಕೊಟ್ಟ ಮಶ್ರೂಮ್ ಬಿರಿಯಾನಿಯನ್ನು ನೀವು ಆನಂದಿಸಿದ್ದೀರಿ ಎಂದು ಭಾವಿಸುತ್ತೇವೆ. ಶ್ರೇಯಸ್ ಅಯ್ಯರ್ ಒಳ್ಳೆಯ ಮನುಷ್ಯ. ಸಾಮಾಜಿಕ ಅಂತರವಿರುವ ಹೊಸ ಚಿತ್ರಗಳಿವು" ಎಂದು ಬರೆದುಕೊಂಡಿದ್ದಾರೆ.