ಮೌಂಗನ್ಯುಯಿ: ಕಿವೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಭಾರತ ತಂಡದ ಪರ ಮೂವರು ಕನ್ನಡಿಗರು ಕಣಕ್ಕಿಳಿದಿದ್ದು, ಬ್ಯಾಟಿಂಗ್ ನಡೆಸುವ ವೇಳೆ ರಾಹುಲ್ ಹಾಗೂ ಮನೀಷ್ ಪಾಂಡೆ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಮೊದಲೆರಡು ಏಕದಿನ ಪಂದ್ಯದಲ್ಲಿ ಅವಕಾಶ ವಂಚಿತರಾಗಿದ್ದ ಮನೀಷ್ ಪಾಂಡೆ ಕೊನೆಯ ಪಂದ್ಯದಲ್ಲಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದರು. ಈ ವೇಳೆ ಶ್ರೇಯಸ್ ಅಯ್ಯರ್ ಔಟಾಗುತ್ತಿದ್ದಂತೆ ಮೈದಾನಕ್ಕಿಳಿದ ಪಾಂಡೆ ರಾಹುಲ್ ಜೊತೆ ಸೇರಿ ಶತಕದ ಜೊತೆಯಾಟ ನಡೆಸಿದರು.
31.3ನೇ ಓವರ್ನಲ್ಲಿ ಶ್ರೇಯಸ್ ಅಯ್ಯರ್ ಔಟಾದರು. ಈ ವೇಳೆ ಪಾಂಡೆ ತಾವು ಎದುರಿಸಿದ ಎರಡನೇ ಬಾಲ್ನಲ್ಲಿ ರನ್ ತೆಗೆದಿದ್ದ ಪಾಂಡೆ ಮತ್ತೊಂದು ರನ್ ತೆಗೆಯಲು ರಾಹುಲ್ರನ್ನು ಕರೆದಿದ್ದಾರೆ. ಇದಕ್ಕೆ ರಾಹುಲ್ 'ಬೇಡ ಬೇಡ' ಎಂದು ಕೂಗಿದ್ದಾರೆ. ಇವರಿಬ್ಬರ ಮಾತು ಸ್ಟಂಪ್ಮೈಕ್ ಮೂಲಕ ಟಿವಿ ವೀಕ್ಷಕರಿಗೆ ಕೇಳಿಸಿದೆ.
ಕರ್ನಾಟಕ ತಂಡದ ಪರ ಆಡುವ ಈ ಇಬ್ಬರು ಉತ್ತಮ ಗೆಳೆಯರಾಗಿದ್ದಾರೆ. ರಾಹುಲ್ ಮೂಲತಃ ಕನ್ನಡಿಗರಾಗಿದ್ದಾರೆ. ಆದರೆ, ಮನೀಷ್ ಮೂಲ ಉತ್ತರಾಂಚಲವಾಗಿದ್ದರೂ ಬಹಳ ವರ್ಷಗಳಿಂದ ಕರ್ನಾಟಕದಲ್ಲೇ ನೆಲೆಸಿದ್ದು, ಕರ್ನಾಟಕ ರಣಜಿ ತಂಡದ ಪರ ಆಡುತ್ತಿರುವುದರಿಂದ ಕನ್ನಡವನ್ನು ಚೆನ್ನಾಗಿ ಮಾತನಾಡಬಲ್ಲರು. ಈ ಹಿಂದೆಯೂ ಐಪಿಎಲ್ ಪಂದ್ಯದ ವೇಳೆ ಉತ್ತಪ್ಪ ಜೊತೆ ಕನ್ನಡದಲ್ಲಿ ಮಾತನಾಡಿದ್ದರು. ಇದೀಗ ಮತ್ತೆ ರಾಹುಲ್ ಜೊತೆ ಮೈದಾನದಲ್ಲಿ ಕನ್ನಡ ಮಾತನಾಡಿರುವುದು ಕನ್ನಡಿಗರಿಗೆ ಖುಷಿ ತಂದಿದೆ.
ಈ ಪಂದ್ಯದಲ್ಲಿ ರಾಹುಲ್ 112 ರನ್ಗಳಿಸಿದರೆ, ಮನೀಷ್ ಪಾಂಡೆ 42 ರನ್ಗಳಿಸಿ ಉತ್ತಮ ಕೊಡುಗೆ ನೀಡಿದರೆ, ಮತ್ತೊಬ್ಬ ಕರ್ನಾಟಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಕೇವಲ ರನ್ಗೆ ವಿಕೆಟ್ ಒಪ್ಪಿಸಿ ಔಟಾಗಿ ನಿರಾಶೆ ಮೂಡಿಸಿದರು.