ಆಂಟಿಗುವಾ: ವಿಂಡೀಸ್ ನಾಯಕ ಕಿರನ್ ಪೊಲಾರ್ಡ್ ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಒಂದೇ ಓವರ್ನ 6 ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಸರಿಗಟ್ಟಿದ್ದಾರೆ.
ಪೊಲಾರ್ಡ್, ಲಂಕಾ ಸ್ಪಿನ್ನರ್ ಧನಂಜಯ ಬೌಲಿಂಗ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಒಂದೇ ಓವರ್ನಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದ ಎಂಟನೇ ಆಟಗಾರ ಎನಿಸಿಕೊಂಡರು. ದಿಗ್ಗಜ ಸರ್ ಗ್ಯಾರಿ ಸೋಬರ್ಸ್ ನಂತರ ಪೊಲಾರ್ಡ್ ಈ ದಾಖಲೆ ಬರೆದ ವಿಂಡೀಸ್ನ ಎರಡನೇ ಬ್ಯಾಟ್ಸ್ಮನ್ ಆದರು. 1968ರಲ್ಲಿ ಸೋಬರ್ಸ್ ಈ ಸಾಧನೆ ಮಾಡಿದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದರು. ಬಳಿಕ ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ 1985ರಲ್ಲಿ ಬರೋಡಾದ ಎಡಗೈ ಸ್ಪಿನ್ನರ್ ತಿಲಕ್ ರಾಜ್ ಎಸೆದ ಓವರ್ನ ಆರೂ ಎಸೆತಗಳನ್ನು ಸಿಕ್ಸರ್ಗೆ ಅಟ್ಟಿದ್ದರು.
2007ರಲ್ಲಿ ನಡೆದ ಟಿ-20 ವಿಶ್ವಕಪ್ನಲ್ಲಿ ಭಾರತ ತಂಡದ ಆಲ್ರೌಂಡರ್ ಯುವರಾಜ್ ಸಿಂಗ್ ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ ಓವರ್ನಲ್ಲಿ 6 ಸಿಕ್ಸರ್ ಬಾರಿಸಿದ್ದರು. ಇದು ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿನ ಮೊದಲ ವಿಶ್ವದಾಖಲೆ ಆಗಿದೆ. ಇದೀಗ ಯುವಿ ದಾಖಲೆಯನ್ನು ಪೊಲಾರ್ಡ್ ಸರಿಗಟ್ಟಿದ್ದಾರೆ.
11 ಎಸೆತಗಳಲ್ಲಿ 38 ರನ್ ಗಳಿಸಿ ಪೊಲಾರ್ಡ್ ಔಟಾದರು. ಧನಂಜಯ ಎಸೆದ ಪಂದ್ಯದ ಆರನೇ ಓವರ್ನಲ್ಲಿ ಮೊದಲ ಎಸೆತ ಲಾಂಗ್ - ಓವರ್ಗೆ, ಎರಡನೇ ಎಸೆತದಲ್ಲಿ ಅವರನ್ನು ಸೈಟ್ಸ್ಕ್ರೀನ್ನತ್ತ ಬಾರಿಸಿದರು. ಬಳಿಕ ಆಫ್-ಸ್ಟಂಪ್ ಹೊರಗೆ ಬಿದ್ದ ಬೌಲ್ನ್ನು ಪೊಲಾರ್ಡ್ ಲಾಂಗ್-ಆಫ್ ಮೇಲೆ ಸಿಕ್ಸರ್ಗೆ ಅಟ್ಟಿದರು. ನಾಲ್ಕನೇ ಚೆಂಡನ್ನು ಡೀಪ್ ಮಿಡ್-ವಿಕೆಟ್ನತ್ತ ಬಾರಿಸಿದರೆ, 5ನೇ ಎಸೆತವನ್ನು ಬೌಲರ್ನ ತಲೆಯ ಮೇಲೆ ಹೊಡೆದರು. ಹೀಗೆ ಸಿಕ್ಸರ್ ಸುರಿಮಳೆಯಿಂದ ದನಂಜಯ ಸುಸ್ತಾದರೆ, ತವರಿನ ಪ್ರೇಕ್ಷಕರೆದರು ಪೊಲಾರ್ಡ್ ಅಬ್ಬರಿಸಿದರು.